ಹಾಸನ: ಅಭಿವೃದ್ಧಿ ಎಂದರೆ ಕೇವಲ ದೊಡ್ಡ-ದೊಡ್ಡ ಮುಖ್ಯ ರಸ್ತೆ ಮಾಡೋದು, ದೊಡ್ಡ-ದೊಡ್ಡ ಆಸ್ಪತ್ರೆಗಳನ್ನ ಕಟ್ಟುವುದು ಅಲ್ಲ. ಸಾರ್ವಜನಿಕರಿಗೆ ಬೇಕಾದ ಮೂಲ ಸೌಕರ್ಯವನ್ನ ಒದಗಿಸುವ ಕಾರ್ಯ ಮಾಡುವುದು ಅಭಿವೃದ್ಧಿ ಎಂದು ಹಾಸನ ಶಾಸಕ ಪ್ರೀತಂ ಜೆ. ಗೌಡ ಹೇಳಿದರು.
ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಹಾಸನದ ವಿದ್ಯಾನಗರ ಮತ್ತು ವಿವೇಕ ನಗರ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಪ್ರೀತಂ ಜೆ. ಗೌಡ, ಅಭಿವೃದ್ಧಿ ಎಂದರೆ ಕ್ಷೇತ್ರದ ನಾಗರಿಕರಿಗೆ ಬೇಕಾಗುವ ಮೂಲಭೂತ ಮತ್ತು ಮೂಲ ಸೌಕರ್ಯವನ್ನ ಒದಗಿಸುವುದು. ಅದುವೇ ಬಿಜೆಪಿ ಕನಸು ಅಂತ ಹೇಳುವ ಮೂಲಕ ಪರೋಕ್ಷವಾಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಟಾಂಗ್ ನೀಡಿದ್ರು.
ನಗರದ ಎರಡು ರಸ್ತೆಯನ್ನ 15 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಹಾಸನವನ್ನ ಧೂಳು ಮತ್ತು ಮಣ್ಣು ಮುಕ್ತ ಮಾಡುವ ಕನಸು ನನ್ನದು. ಇನ್ನು ಮೂರೂವರೆ ವರ್ಷದಲ್ಲಿ ಅದನ್ನ ನಮ್ಮ ಸರ್ಕಾರದ ನೆರವಿನಿಂದ ಮಾಡುವುದಾಗಿ ತಿಳಿಸಿದರು.
ಇನ್ನು ನೂತನ ಜಿಲ್ಲಾಧಿಕಾರಿ ಗಿರೀಶ್, ನಗರದ ಹುಣಸಿನಕೆರೆ ಮತ್ತು ರಾಜಕುಮಾರ್ ನಗರ, ನಗರಸಭೆಯ ಕಚೇರಿಯ ಅಕ್ಕಪಕ್ಕದಲ್ಲಿನ ಹಳೇಯ ಮತ್ತು ಡಾಂಬರೀಕರಣವಾಗದ ರಸ್ತೆಗಳನ್ನ ವೀಕ್ಷಿಸಿ ನಾಗರಿಕರು ಓಡಾಡಲು ಉತ್ತಮ ರಸ್ತೆ ನಿರ್ಮಾಣ ಮಾಡಿಸಲು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದರು. ಅದರ ಬೆನ್ನಲ್ಲಿಯೇ ನಗರದ ಎರಡು ಬಡಾವಣೆಯನ್ನ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.