ಹಾಸನ: ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವವರನ್ನು ಮುಂದಿಟ್ಟುಕೊಂಡು ಬಿಜೆಪಿ ಪಕ್ಷದ ಶಾಸಕ ಮತ್ತು ಜೆಡಿಎಸ್ ಮುಖಂಡರು ರಾಜಕೀಯ ಮಾಡಲು ಹೊರಟಿರುವುದು ನಾಚಿಕೆಗೇಡಿನ ವಿಚಾರವಾಗಿದೆ ಎಂದು ಕಾಂಗ್ರೆಸ್ ಮುಖಂಡ ದೇವರಾಜೇಗೌಡ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕಳೆದ 60 ದಿನಗಳಿಂದ ಲಾಕ್ಡೌನ್ ಘೋಷಣೆ ಮಾಡಿವೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಹಲವು ವರ್ಗದ ಜನತೆ ಅದರಲ್ಲೂ ಅಸಂಘಟಿತ ಕಾರ್ಮಿಕರು, ಕೂಲಿಕಾರರು, ವೃದ್ಧರು, ಬಡವರು ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ದೇವರಾಜೇಗೌಡ ಸುದ್ದಿಗೋಷ್ಠಿ ಆದರೆ ಇಂತಹ ಪರಿಸ್ಥಿತಿಯಲ್ಲಿ ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಜೆಡಿಎಸ್ ಮುಖಂಡರು ಸೇರಿ ಕಟ್ಟಿನಕೆರೆ ಮಾರ್ಕೆಟ್ ವ್ಯಾಪಾರಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ವ್ಯಾಪಾರಿಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿರುವುದು ನಾಚಿಕೆ ಪಡುವಂತಹ ವಿಚಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೆ ಕಟ್ಟಿನಕೆರೆ ಮಾರ್ಕೆಟ್ ಇರುವ ಜಾಗದಲ್ಲಿ ತಮ್ಮ ತಮ್ಮ ಹಿಂಬಾಲಕರು ಮಾತ್ರ ವ್ಯಾಪಾರ ಮಾಡುವಂತೆ ಅನುವು ಮಾಡಿಕೊಟ್ಟು ಸರ್ಕಾರಿ ಜಾಗವನ್ನು ದುರುಪಯೋಗಪಡಿಸಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಪರಸ್ಪರ ಕೆಸರು ಎರಚಿಕೊಂಡು ಎರಡೂ ಪಕ್ಷದ ಮುಖಂಡರು ಅವರವರ ಯೋಗ್ಯತೆಯನ್ನು ಪ್ರದರ್ಶನ ಮಾಡುತ್ತಿದ್ದಾರೆ. ಗಂಡ-ಹೆಂಡತಿಯ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಈ ಎರಡು ಪಕ್ಷದ ಮುಖಂಡರ ಮಧ್ಯೆ ಸಿಲುಕಿರುವ ಮಾರ್ಕೆಟ್ ವ್ಯಾಪಾರಿಗಳು ನಲುಗಿ ಹೋಗಿದ್ದಾರೆ. ಈ ವ್ಯಾಪಾರಿಗಳಿಗೆ ನಿಗದಿತ ಜಾಗ ಗುರುತು ಮಾಡಿ ಅವರ ಪಾಡಿಗೆ ವ್ಯಾಪಾರ ಮಾಡಲು ಮುಕ್ತವಾಗಿ ಅವಕಾಶ ಮಾಡಿಕೊಟ್ಟರೆ ಅನುಕೂಲವಾಗುತ್ತದೆ ಎಂದರು.