ಹಾಸನ: ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಮತ್ತು ಜೆಸಿಟಿಯು ನೇತೃತ್ವದಲ್ಲಿ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು..
ಕೋವಿಡ್ ಸಾಂಕ್ರಾಮಿಕ ರೋಗವು ದೇಶದ ಜನತೆಯನ್ನು ಬಾಧಿಸುತ್ತಿದ್ದು ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ದೇಶದಲ್ಲಿ ಆರ್ಥಿಕತೆ ಕುಸಿತದತ್ತ ಸಾಗುತ್ತಲೆ ಇದೆ. ಇದರಿಂದ ದುಡಿಯುವ ಜನರ ಬದುಕು ಸಂಕಷ್ಟಕ್ಕೆ ಈಡಾಗಿದೆ. ಕೋವಿಡ್ ನಿಯಂತ್ರಿಸಿ ಜನರನ್ನು ಸಂರಕ್ಷಿಸಬೇಕಾದ ಕೇಂದ್ರ-ರಾಜ್ಯ ಸರ್ಕಾರಗಳು ಕೈಚೆಲ್ಲಿ ಕೂತಿವೆ. ಲಾಕ್ಡೌನ್ನಿಂದ ಉಂಟಾದ ದುಷ್ಪರಿಣಾಮಗಳನ್ನು ಎದುರಿಸಲು ಯಾವುದೇ ಕ್ರಮ ಜರುಗಿಸಿರುವುದಿಲ್ಲ ಎಂದು ಕಾರ್ಯಕರ್ತರು ದೂರಿದರು.
ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ ವಲಸೆ ಕಾರ್ಮಿಕರ ಸುರಕ್ಷತಾ ಪ್ರಯಾಣದ ಬೇಡಿಕೆಗಳನ್ನು ಈಡೇರಿಸಿರುವುದಿಲ್ಲ. ಬದಲಾಗಿ ಕಾರ್ಪೊರೇಟ್ ಬಂಡವಾಳದಾರರಿಗೆ ತೆರಿಗೆ, ಸಾಲಮನ್ನಾ, ಬಡ್ಡಿರಹಿತ ಸಾಲ, ಇನ್ನಿತರೆ ಭಾರಿ ರಿಯಾಯಿತಿಗಳನ್ನು ಪ್ರಕಟಿಸಿ ತಾನು ಬಂಡವಾಳಶಾಹಿ ಸ್ನೇಹಿ ಎಂಬುದನ್ನು ಸರ್ಕಾರ ಮತ್ತೊಮ್ಮೆ ಸಾಬೀತು ಪಡಿಸಿದೆ ಎಂದು ಕಿಡಿಕಾರಿದರು.
ಕೊರೊನಾ ವಾರಿಯರ್ಸ್ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಹಾಗೂ ಅವರ ಕೆಲಸ ಖಾಯಂ ಮಾಡಬೇಕು. ಸರ್ಕಾರಿ ನೌಕರರಿಗೆ ಹಾಗೂ ಪಿಂಚಣಿದಾರರ ತುಟ್ಟಿಭತ್ಯೆ ಕಡಿತ ರದ್ದುಪಡಿಸಬೇಕು ಮತ್ತು ಎನ್.ಪಿ.ಎಸ್. ರದ್ದುಪಡಿಸಿ ನಿಶ್ಚಿತ ಪಿಂಚಣಿಯನ್ನು ಮರು ಸ್ಥಾಪಿಸಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು. ಪ್ರತಿ ವ್ಯಕ್ತಿಗೆ ಆರು ತಿಂಗಳವರೆಗೆ ತಲಾ 10 ಕೆಜಿ ಆಹಾರ ಧಾನ್ಯವನ್ನು ಉಚಿತವಾಗಿ ನೀಡಬೇಕು ಎಂದರು.
ಇನ್ನು ಕಾರ್ಪೋರೇಟ್-ಭೂಮಾಲೀಕರಿಗೆ ಅನುಕೂಲಕರವಾಗಿರುವ ಹಾಗೂ ರೈತ ವಿರೋಧಿಯಾಗಿರುವ ಭೂಮಿ ಮತ್ತು ಕೃಷಿ ಶಾಸನಗಳ ತಿದ್ದುಪಡಿ ಕೈಬಿಡಬೇಕು. ವಿದ್ಯುತ್ ತಿದ್ದುಪಡಿ ಮಸೂದೆ 2020ನ್ನು ಕೈಬಿಡಿ ಹಾಗೂ ವಿದ್ಯುತ್ ಕ್ಷೇತ್ರ ಖಾಸಗೀಕರಣ ನಿಲ್ಲಿಸಿ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ಕೈಬಿಡಿ ಹಾಗೂ ಅವುಗಳ ಮೇಲಿನ ಸುಂಕ ಕಡಿತ ಮಾಡಿ. ಕೊರೊನಾ ಸೋಂಕಿತರಿಗೆ ಸರ್ಕಾರವೇ ಪೂರ್ಣವಾಗಿ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಲಾಯಿತು.