ಹಾಸನ: ಸಕಲೇಶಪುರ ತಾಲೂಕು ವನಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಹಳ್ಳಿ (ವನಗೂರು) ನಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯ ಜಾಗದ ಒತ್ತುವರಿ ತೆರವುಗೊಳಿಸಿ ಗ್ರಾಮಸ್ಥರಿಗೆ ನ್ಯಾಯ ಒದಗಿಸಿಕೊಡುವಂತೆ ಗ್ರಾಮದ ಚಂದ್ರೇಶೇಖರ್ ಆಗ್ರಹಿಸಿದ್ದಾರೆ.
ಶಾಲೆ ಜಾಗದ ಒತ್ತುವರಿ ತೆರವುಗೊಳಿಸುವಂತೆ ಆಗ್ರಹ - hassan news
ಶಾಲೆಯ ಸುತ್ತ ಮುತ್ತಲ ಪ್ರದೇಶವನ್ನು ಖಾಸಗಿ ವ್ಯಕ್ತಿ ಒತ್ತುವರಿ ಮಾಡಿಕೊಂಡಿದ್ದು, ಇದನ್ಉ ತೆರವು ಮಾಡಿ ನ್ಯಾಯ ದೊರಕಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಸುಮಾರು 1956 ನೇ ಇಸವಿಯಲ್ಲೇ ಪ್ರಾರಂಭವಾಗಿದ್ದು, ಸುತ್ತಲೂ ಇರುವ ಸರ್ಕಾರಿ ಭೂಮಿಯನ್ನು ಹಿರಿಯರು ಶಾಲೆಗೆಂದು ಮೀಸಲಿರಿಸಿ ಭೂಮಿಯ ಸುತ್ತ ಕಂದಕ ನಿರ್ಮಿಸಿದ್ದರು. ಸರ್ವೆ ನಂ. 63 ರಲ್ಲಿ 1-13 ಗುಂಟೆ ಹಾಗೂ ಸರ್ವೆ ನಂ.133 ರಲ್ಲಿ 4 ಎಕರೆ ಭೂಮಿಯಿದೆ. ಆದರೆ, ಈಗ ಸರ್ವೆ ನಂ. 63ರಲ್ಲಿ ಮಾಗೇರಿ ಗ್ರಾಮದ ದಯಾನಂದ ಎಂ.ಆರ್. ಬಿನ್ ರಾಮೇಗೌಡ ಎಂಬುವರು ತಮ್ಮ ಮನೆ ಮುಂದೆ ಭೂ ಕುಸಿತವಾಗಿ ಸಂತ್ರಸ್ತರಾಗಿದ್ದೇವೆ ಎಂದು ಸುಳ್ಳು ಹೇಳಿಕೊಂಡು ಆ ಶಾಲಾ ಜಾಗವನ್ನು ತಮ್ಮ ಹೆಸರಿಗೆ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ. ರಾತ್ರೋರಾತ್ರಿ ಅಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿದ್ದಾರೆ. ಅದಕ್ಕೆ ಗ್ರಾಮ ಪಂಚಾಯ್ತಿಯಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು ಆರೋಪಿಸಿದರು.
ಈ ಶಾಲೆಯ ಸುತ್ತಮುತ್ತಲ ಮಾಗೇರಿ, ಕಲ್ಲಹಳ್ಳಿ, ಹಿಜ್ಜನಹಳ್ಳಿ, ನೆರಡಿ, ಬಾಣಗೇರಿ ಗ್ರಾಮಸ್ಥರು ಈ ವಿಷಯವಾಗಿ ಸಂಸದರು, ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು, ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿ, ಸದರಿ ಜಾಗವನ್ನು ಶಾಲೆಯ ಹೆಸರಲ್ಲೇ ಉಳಿಸಿಕೊಡಬೇಕಾಗಿ ಕೇಳಿಕೊಂಡಿದ್ದಾರೆ ಎಂದು ವಿವರಿಸಿದರು.