ಹಾಸನ: ಮುಂದಿನ ಮೂರು ವಾರಗಳು ಅತ್ಯಂತ ಜಾಗೃತರಾಗಿರಬೇಕಾದಂತಹ ವಾರಗಳಾಗಿದ್ದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಕರೆ ನೀಡಿದ್ದಾರೆ.
ತಮ್ಮ ಕಚೇರಿ ಸಭಾಂಗಣದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈವರೆಗೆ 33 ಜನರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲಾ ಮಾದರಿಯ ಫಲಿತಾಂಶವು ನೆಗೆಟಿವ್ ಬಂದಿದೆ ಎಂದರು.
ಮುಂದಿನ ದಿನಗಳಲ್ಲಿ ಸಾರ್ವಜನಿಕರು ಓಡಾಟ ಕಡಿಮೆ ಮಾಡಬೇಕು, ಭಾನುವಾರ, ಮಂಗಳವಾರ, ಗುರುವಾರ ಮತ್ತು ಶನಿವಾರ ಬೆಳಗ್ಗೆ 7 ಗಂಟೆಯಿಂದ 12 ಗಂಟೆವರೆಗೆ ದಿನಸಿ ಅಂಗಡಿ, ಮಾಲ್, ಪೆಟ್ರೋಲ್ ಬಂಕ್ಗಳೂ ತೆರೆದಿರುತ್ತವೆ. ಜೊತೆಗೆ ಹಾಲು, ಪೇಪರ್, ಮೆಡಿಕಲ್ ಸ್ಟೋರ್ ಮತ್ತು ಆಸ್ಪತ್ರೆಗಳು ಎಲ್ಲಾ ದಿನಗಳಲ್ಲಿ ತೆರೆದಿರುತ್ತವೆ ಎಂದು ಅವರು ತಿಳಿಸಿದರು.
ಮುಂದಿನ ಮೂರು ವಾರ ಜಾಗೃತರಾಗುವಂತೆ ಜನತೆಗೆ ಜಿಲ್ಲಾಧಿಕಾರಿ ಮನವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಮಾತನಾಡಿ, ಅನಾವಶ್ಯಕವಾಗಿ ಹೊರಗೆ ಬಂದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ತಾಲೂಕು ಮಟ್ಟದಲ್ಲಿ ಒಂದೊಂದು ಬಂಕ್ಗಳನ್ನು ಗುರುತಿಸಿ ಅದನ್ನು ಬೆಳಗ್ಗೆಯಿಂದ ರಾತ್ರಿಯವರೆಗೂ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಎಪಿಎಂಸಿ ಯಲ್ಲಿ ಚಿಲ್ಲರೆ ವ್ಯಾಪಾರಿಗಳಿಗೆ ಮಾತ್ರ ಖರೀದಿಸಲು ಅವಕಾಶವಿದ್ದು, ಬೇರೆಯವರು ಖರೀದಿಸಲು ನಿರ್ಬಂಧವಿರುತ್ತದೆ. ಆದ್ದರಿಂದ ಮನೆ ಹತ್ತಿರದ ಅಂಗಡಿಗಳಲ್ಲಿ ನಿಗದಿತ ವೇಳೆಯಲ್ಲಿ ದಿನಸಿ ಖರೀದಿಸಬೇಕು. ಉಳಿದ ಅಮಯದಲ್ಲಿ ಅನಾವಶ್ಯಕವಾಗಿ ಹೊರಗೆ ಬಂದರೆ ಅಂತಹವರನ್ನು ಕ್ವಾರಂಟೈನ್ನಲ್ಲಿ ಇರಿಸುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಕೆ ರವಾನಿಸಿದರು.