ಹಾಸನ: ಜಿಲ್ಲೆಯಲ್ಲಿ ಇದೇ ತಿಂಗಳ 2ನೇ ತಾರೀಖಿನಿಂದ 8ರವರೆಗೂ ಹೆಚ್ಚು ಮಳೆಯಾಗಿದ್ದು, ನಷ್ಟ ಪರಿಹಾರಕ್ಕೆ ಹೆಚ್ಚುವರಿ ಹಣ ಬೇಕಾದಲ್ಲಿ ಸರ್ಕಾರಕ್ಕೆ ವಿಶೇಷ ಪ್ರಸ್ತಾವನೆ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
ಮಳೆಯಿಂದ ಉಂಟಾಗಿರುವ ನಷ್ಟದ ಬಗ್ಗೆ ಗುರುವಾರ ಮಾಧ್ಯಮಗಳಿಗೆ ಅವರು ಮಾಹಿತಿ ನೀಡಿದರು.
ಮಳೆ ಹಾನಿ ಕುರಿತು ಜಿಲ್ಲಾಧಿಕಾರಿ ಆರ್.ಗಿರೀಶ್ ಮಾಹಿತಿ ಈವರೆಗೂ ಜಿಲ್ಲೆಯಲ್ಲಿ ಶೇ. 246ರಷ್ಟು ಹೆಚ್ಚು ಮಳೆ ಬಿದ್ದಿದೆ. ಸಕಲೇಶಪುರ ತಾಲೂಕಿನಲ್ಲಿ 126 ಮಿ.ಮೀ. ವಾಡಿಕೆ ಮಳೆಗೆ ಬದಲಾಗಿ 658 ಮಿ.ಮೀ. ಅಂದರೆ ಶೇ. 442ರಷ್ಟು ಹೆಚ್ಚು ಮಳೆಯಾಗಿದೆ. ಈ ಬಾರಿ ಸಕಲೇಶಪುರ, ಆಲೂರು, ಬೇಲೂರು ತಾಲೂಕುಗಳಲ್ಲಿ ಹೆಚ್ಚು ನಷ್ಟ ಉಂಟಾಗಿದೆ. ಅರಕಲಗೂಡಿನಲ್ಲಿ ಕಳೆದ ವರ್ಷದ ಮಳೆಗೂ ಈ ವರ್ಷದ ಮಳೆಗೂ ವ್ಯತ್ಯಾಸ ಕಂಡುಬಂದಿದೆ. ಗಾಳಿಯಿಂದಾಗಿ ಬಹಳಷ್ಟು ನಷ್ಟ ಉಂಟಾಗಿದೆ ಎಂದು ವಿವರಿಸಿದರು.
332 ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. 700 ರಿಂದ 800 ವಿದ್ಯುತ್ ಕಂಬಗಳು ಧರೆಗುರುಳಿವೆ. ಅವೆಲ್ಲವನ್ನೂ ಮತ್ತೆ ಮರು ಸ್ಫಾಪಿಸಲು ಕ್ರಮ ಕೈಗೊಳ್ಳಲಾಗಿದೆ. 330 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಇನ್ನೂ 30 ಗ್ರಾಮಗಳ ವಿದ್ಯುತ್ ದುರಸ್ತಿ ಕೆಲಸ ಬಾಕಿ ಉಳಿದಿದೆ ತಿಳಿಸಿದರು.
ಈ ವರ್ಷದ ಮಳೆಗೆ ಓರ್ವ ಮೃತಪಟ್ಟಿದ್ದಾನೆ. ಪರಿಹಾರವಾಗಿ ಅವರ ಕುಟುಂಬಕ್ಕೆ 4 ಲಕ್ಷ ರೂ. ಚೆಕ್ ವಿತರಿಸಲಾಗಿದೆ. ಜೊತೆಗೆ ಎರಡು ಜಾನುವಾರುಗಳೂ ಸಾವನ್ನಪ್ಪಿದ್ದು, ಬೇರೆ ಬೇರೆ ಬೆಳೆಗಳು ನಷ್ಟವಾಗಿವುದರ ಬಗ್ಗೆ ವಿವರ ಸಂಗ್ರಹಿಸಲಾಗಿದೆ. ಕೃಷಿ ವಿಭಾಗದಲ್ಲಿ ಸುಮಾರು 4,460 ಹೆಕ್ಟೇರ್ ಹಾಗೂ ತೋಟಗಾರಿಕಾ ವಿಭಾಗದಲ್ಲಿ 940 ಹೆಕ್ಟೇರ್ ಬೆಳೆ ನಷ್ಟವಾಗಿದೆ.
ಅಂದಾಜು 150 ಕಿ.ಮೀ.ಗಳಷ್ಟು ವಿವಿಧ ರಸ್ತೆಗಳು ಹಾನಿಗೊಳಗಾಗಿವೆ. ಜೊತೆಗೆ 32 ಅಂಗನವಾಡಿ ಕೇಂದ್ರ ಹಾಗೂ 87 ಶಾಲಾ ಕಟ್ಟಡಗಳಿಗೆ ಹಾನಿಯಾಗಿದೆ. ಎಸ್ಡಿಆರ್ಎಫ್ ಮೂಲಕ ಕಾಮಗಾರಿಗಳನ್ನು ಮಾಡಲಾಗುವುದು. ಹೆಚ್ಚುವರಿ ಹಣ ಬೇಕಾದಲ್ಲಿ ಸರ್ಕಾರಕ್ಕೆ ವಿಶೇಷ ಪ್ರಸ್ತಾವನೆ ಸಲ್ಲಿಸಬೇಕಿದೆ ಎಂದು ಅವರು ತಿಳಿಸಿದರು.
ಕಳೆದ ವರ್ಷ 2,140 ಮನೆಗಳು ಬಿದ್ದು ನಷ್ಟವಾಗಿದೆ. ಈ ವರ್ಷದಲ್ಲಿ ಒಟ್ಟು 330 ಮನೆಗಳು ಬಿದ್ದಿದೆ. ಸಕಲೇಶಪುರದಲ್ಲಿ 206 ಮನೆಗಳು, ಹಾಸನ 34, ಆಲೂರು 16, ಅರಕಲಗೂಡು 18 ಮನೆಗಳು ಮಳೆ ಮತ್ತು ಗಾಳಿಯಿಂದ ಹಾನಿಗೊಳಗಾಗಿವೆ. ಕಳೆದ ವರ್ಷ ನಿರ್ವಹಿಸಿದಂತೆ ಎಬಿಸಿ ಕೆಟಗರಿಯಲ್ಲಿ ವಿಂಗಡಣೆ ಮಾಡಿ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಷನ್ ಮೂಲಕ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು.