ಚನ್ನರಾಯಪಟ್ಟಣ: ಪಟ್ಟಣದ ವಿನಾಯಕ ಗ್ಯಾಸ್ ಆಫೀಸ್ ಮೈದಾನದಲ್ಲಿ ಶ್ರೀ ಗುರುಕಲಾ ಸಂಘ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಇವರುಗಳ ಸಹಯೋಗದಲ್ಲಿ ಅ.೧೧ರಿಂದ ಅ.೨೧ರವರೆಗೆ ಹತ್ತು ದಿನಗಳ ಪೌರಾಣಿಕ ನಾಟಕೋತ್ಸವ ನಡೆಯಲಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಹತ್ತು ದಿನಗಳ ಪೌರಣಿಕ ನಾಟಕೋತ್ಸವ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಗುರುಕಲಾ ಸಂಘದ ಕಾರ್ಯದರ್ಶಿ ಜ್ಞಾನದರ್ಶನ ಮಹಾದೇವ್ ತಾಲೂಕಿನಲ್ಲಿ ಪೌರಣಿಕ ನಾಟಕಗಳು ಒಂದು ದಿನಕ್ಕೆ ಸೀಮಿತವಾಗಿ ಪ್ರದರ್ಶನ ಕಾಣುತ್ತಿದ್ದವು. ವಿನೂತನ ಪ್ರಯತ್ನವಾಗಿ ನಮ್ಮ ಸಂಘ ಮುಂದಾಗಿ ೧೦ ದಿನಗಳ ಕಾಲ ನಾಟಕ ಪ್ರದರ್ಶನದೊಂದಿಗೆ ಪೌರಾಣಿಕ ನಾಟಕೋತ್ಸವ ಏರ್ಪಡಿಸಲಾಗಿದೆ. ಸುತ್ತಮುತ್ತಲ ಗ್ರಾಮಸ್ಥರ, ಕಲಾಭಿಮಾನಿಗಳ ಅನುಕೂಲಕ್ಕಾಗಿ ಹಗಲು ವೇಳೆ ಪ್ರದರ್ಶನ ನಡೆಯಲಿದ್ದು, ನಿತ್ಯ ಬೆಳಗ್ಗೆ ೧೧ ರಿಂದ ಸಂಜೆ 6 ಗಂಟೆವರೆಗೂ ಕುರುಕ್ಷೇತ್ರ, ಸಂಪೂರ್ಣ ರಾಮಾಯಣ, ಶನಿಪ್ರಭಾವ ಸೇರಿ ಸಾಮಾಜಿಕ ನಾಟಕ ಮುದುಕನ ಮದುವೆ ನಾಟಕ ಪ್ರದರ್ಶನವಿರುತ್ತದೆ. ನಂದೀಪುರದ ನಂದೀಶ್ವರ ಡ್ರಾಮಾ ಸೀನ್ಸ್‌ರವರ ಭವ್ಯ ರಂಗಸಜ್ಜಿಕೆಯಲ್ಲಿ ಅತ್ಯುತ್ತಮ ಥಿಯೇಟರ್ ನಿರ್ಮಾಣದೊಂದಿಗೆ ವೇದಿಕೆ ರೂಪಗೊಳ್ಳುತ್ತಿದೆ. ತಾಲೂಕಿನಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಪೌರಾಣಿಕ ನಾಟಕೋತ್ಸವ ಬಿಜೆಪಿ ತಾ.ಅಧ್ಯಕ್ಷ ಶಿವನಂಜೇಗೌಡ ಉದ್ಘಾಟಿಸಲಿದ್ದಾರೆ. ಶಾಸಕ ಸಿ.ಎನ್.ಬಾಲಕೃಷ್ಣ, ಎಂಎಲ್ಸಿ ಗೋಪಾಲಸ್ವಾಮಿ, ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ಜಿ.ಪ.ಸದಸ್ಯೆ ಮಂಜುಳ ಶಂಕರ್, ಸಿ.ಎನ್.ಪುಟ್ಟಸ್ವಾಮೀಗೌಡ, ಶ್ವೇತಾ ಆನಂದ್ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.