ಹಾಸನ: ವಿಜಯ ದಶಮಿಯ ಹಿನ್ನಲೆ ಹಾಸನದ ಸಾಲಗಾಮೆ ರಸ್ತೆಯ ಸಮೀಪವಿರುವ ಬನ್ನಿ ಮರವನ್ನು ಸಾಂಕೇತಿಕವಾಗಿ ಕಡಿದು ದಸರಾವನ್ನು ಸರಳವಾಗಿ ಆಚರಣೆ ಮಾಡಲಾಯಿತು.
ಹಾಸನ: ಬನ್ನಿ ಮರ ಕಡಿದು ಸರಳವಾಗಿ ದಸರಾ ಆಚರಣೆ ಹಾಸನದ ಉಪ ವಿಭಾಗಾಧಿಕಾರಿ ಜಗದೀಶ್ ಮೈಸೂರು ಪೇಟ ಧರಿಸಿ ಚಾಮುಂಡಿ ದೇವಿಯನ್ನ ಪ್ರಾರ್ಥಿಸಿ ಬನ್ನಿ ಮರದ ಪೂಜೆಯನ್ನು ನೆರವೇರಿಸಿದರು. ಪೂಜೆಯ ನಂತರ ಬನ್ನಿ ಮರವನ್ನು ಕಡಿಯಲಾಯಿತು. ಈ ಹಿಂದೆ ಪ್ರತಿವರ್ಷ ಆಯುಧ ಪೂಜೆಯ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಮರವನ್ನು ಕಡಿಯಲಾಗುತಿತ್ತು. ಆದರೆ ಈಗ ಬನ್ನಿ ಮರವನ್ನು ಕಡಿಯುವುದಿಲ್ಲ. ಬದಲಾಗಿ ಬನ್ನಿ ಎಲೆಯನ್ನು ಅಲಂಕರಿಸಿರುವ ಬಾಳೆಯ ದಿಂಡನ್ನು ಕಡಿಯಲಾಗುತ್ತದೆ.
ಈ ಬನ್ನಿ ಎಲೆಗಳಿರುವ ಬಾಳೆ ದಿಂಡನ್ನು ಕಡಿದ ನಂತರ ಮರದ ಎಲೆಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ವಿಜಯ ನಮ್ಮದಾಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರದ್ದಾಗಿದೆ. ಈ ವಿಶೇಷ ಪೂಜೆಯಲ್ಲಿ ನೂರಾರು ಭಕ್ತರು ಭಾಗವಹಿಸಿ ದಿಂಡನ್ನು ಕಡಿದ ನಂತರ ಎಲೆಗಳನ್ನು ಮನೆಗೆ ತೆಗೆದುಕೊಂಡು ಪೂಜೆ ಮಾಡುವ ಪ್ರತೀತಿ ಇದೆ.
ಇದ್ರ ಜೊತೆಗೆ ಹಾಸನದಲ್ಲಿ ಕಳೆದ 15 ವರ್ಷಗಳಿಂದ ನವರಾತ್ರಿಯ ಸಂದರ್ಭದಲ್ಲಿ 9 ದಿನಗಳ ಕಾಲ ಚಾಮುಂಡಿ ತಾಯಿಯ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಹಾಸನದ ಆರ್.ಸಿ.ರಸ್ತೆಯಲ್ಲಿರುವ ಮಂಜುಶ್ರೀ ಡ್ರೈ ಕ್ಲೀನರ್ ಮಾಲೀಕರಾದ ಶಿವಪ್ರಸಾದ್ ಕುಟುಂಬದವರು ಪ್ರತಿನಿತ್ಯ ಒಂದೊಂದು ರೀತಿಯ ಅಲಂಕಾರ ಮಾಡಿಕೊಂಡು ಬರುತ್ತಿದ್ದಾರೆ. ಅಲ್ಲದೇ ಚಾಮುಂಡೇಶ್ವಿರಿ ದೇವಿಗೆ ಒಂಬತ್ತು ದಿನಗಳ ಕಾಲ ದೇವಿಗೆ ಉಡುಗೆಯನ್ನು ನೀಡುತ್ತಾ ಬಂದಿದ್ದು, ಹಾಸನಾಂಬ ದೇವಿಗೂ ತಲಾ ತಲಾಂತರದಿಂದ ದೇವಿಯ ಸೀರೆ ಸೇರಿದಂತೆ ಹಲವು ಬಗೆಯ ಉಡುಗೆಗಳನ್ನ ನೀಡುತ್ತಾ ಬಂದಿದ್ದಾರೆ.
ಇನ್ನು ಈ 9 ದಿನಗಳ ಕಾಲ ಮಾಂಸಹಾರ ಸೇವನೆ ಮಾಡದೇ, ಹೊರಗಿನ ಆಹಾರವನ್ನ ಸೇವಿಸದೇ, ಮನೆಯಲ್ಲಿಯೇ ಮಡಿ ಮಾಡಿ ದೇವಿಗೆ ನೈವೇದ್ಯ ಸಮರ್ಪಣೆ ಮಾಡಲಾಗುತ್ತದೆ. ನವರಾತ್ರಿಯ ಕೊನೆಯ ದಿನವಾದ ವಿಜಯದಶಮಿಯಂದು ಅಮ್ಮನನ್ನು ಉಯ್ಯಾಲೋತ್ಸವ ಮಾಡಿ ನಂಜರಾಜ ಅರಸರ ಮನೆತನದವರು ಬನ್ನಿ ಮರ ಕಡಿದ ಮಾರನೇ ದಿನ ಚಾಮುಂಡೇಶ್ವರಿ ದೇವಿಯನ್ನ ವಿಸರ್ಜನೆ ಮಾಡಲಾಗುತ್ತದೆ. ಇನ್ನು ಈ ವರ್ಷವೂ ದೇವಿಗೆ ವಿಶೇಷ ಅಲಂಕಾರ ಮಾಡಿ ಅಲಂಕೃತ ಮಂಟಪದಲ್ಲಿ ಕೂರಿಸಲಾಗಿತ್ತು. ಕೊರೊನಾ ಹಿನ್ನೆಲೆ ಈ ಬಾರಿ ದೇವಿಯ ಮರೆವಣಿಗೆ ಇಲ್ಲದಿದ್ದರಿಂದ ನವರಾತ್ರಿಯ ದಸರಾ ಆಚರಣೆಯನ್ನ ಸರಳವಾಗಿ ಆಚರಿಸಲಾಯ್ತು.