ಅರಕಲಗೂಡು: ಪಟ್ಟಣದ ಪೊಲೀಸ್ ಠಾಣೆ ಎದುರು ದಲಿತ ಮುಖಂಡರು ಏಕಾಏಕಿ ಧರಣಿಗೆ ಮುಂದಾದ ಹಿನ್ನೆಲೆಯಲ್ಲಿ ಓರ್ವ ಮುಖಂಡನನ್ನು ಸಬ್ ಇನ್ಸ್‌ಪೆಕ್ಟರ್ ವಿಜಯಕೃಷ್ಣ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಪಟ್ಟಣದ 2ನೇ ವಾರ್ಡ್ನ ಮಂಡಿಕೇರಿ ಗ್ರಾಮದ ದೇವಸ್ಥಾನ ನಿವೇಶನವನ್ನು ಒತ್ತುವರಿ ಮಾಡಲಾಗಿದೆ ಎಂದು ಗ್ರಾಮಸ್ಥರು ಮಂಗಳವಾರ ಸಂಜೆ 7:30ಕ್ಕೆ ದೇವಾಲಯದ ನಿವೇಶನದ ಸುತ್ತಲೂ ಬೇಲಿ ನಿರ್ಮಾಣಕ್ಕೆ ಮುಂದಾಗಿದ್ದರು. ಇದಕ್ಕೆ ಒಪ್ಪದ ಗ್ರಾಮದ ಪುಟ್ಟಲಕ್ಷ್ಮಿ ಎಂಬುವರು ನಿವೇಶನ ನಮಗೆ ಸೇರಿದ್ದು ಎಂದು ತಗಾದೆ ತೆಗೆದು ಆರ್ಮಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮಗನಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದಳು.
ಠಾಣೆ ಎದುರು ದಲಿತ ಮುಖಂಡರಿಂದ ಏಕಾಏಕಿ ಧರಣಿ ಯೋಧನ ತಾಯಿ ಮಾತು ಕೇಳಿ ಅಲ್ಲಿಂದಲೇ ಪೊಲೀಸ್ ಠಾಣೆಗೆ ದೂರವಾಣಿ ಮೂಲಕ ಕರೆ ಮಾಡಿ ತಾಯಿ ಹಾಗೂ ತಂಗಿ ರಕ್ಷಣೆ ಕೋರಿದ್ದರು. ದೂರಿನ ಅನ್ವಯ ಗ್ರಾಮಕ್ಕೆ ತೆರಳಿದ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಪೊಲೀಸರು ಗುಂಪು ಚದುರಿಸಲು ತಳ್ಳಾಟ ನಡೆಸಿದ್ದು, ಈ ಸಂದರ್ಭದಲ್ಲಿ ಓರ್ವ ಮಹಿಳೆಗೆ ಪೆಟ್ಟಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಇದನ್ನ ಪ್ರಶ್ನಿಸಲು ಗ್ರಾಮಸ್ಥರು ಬುಧವಾರ ಬೆಳಗ್ಗೆ 12 ಗಂಟೆ ವೇಳೆಗೆ ಪೊಲೀಸ್ ಠಾಣೆಗೆ ಮಹಿಳೆಯರ ಸಮೇತವಾಗಿ ಧಾವಿಸಿದ್ದಾರೆ. ಇವರ ಜೊತೆ ಕೆಲವು ದಲಿತ ಮುಖಂಡರು ಜೊತೆಗೂಡಿ ಪ್ರತಿಭಟನೆ ನೇತೃತ್ವ ವಹಿಸಿ ಏಕಾಏಕಿ ಧರಣಿ ಸತ್ಯಾಗ್ರಹ ನೆಡಸಲು ತೀರ್ಮಾನ ಕೈಗೊಂಡು, ನಂತರ ಠಾಣೆ ಎದುರು ಕುಳಿತು ಪೊಲೀಸ್ ಅಧಿಕಾರಿ ವಿರುದ್ಧ ಧಿಕ್ಕಾರ ಕೂಗಿ ಧರಣಿ ನೆಡಸಲು ಪ್ರಾರಂಭಿಸಿದರು.
ದಲಿತ ಮುಖಂಡರು ಏಕಾಏಕಿ ಧರಣಿಗೆ ಮುಂದಾದ ಹಿನ್ನೆಲೆಯಲ್ಲಿ ಓರ್ವ ಮುಖಂಡನನ್ನು ಸಬ್ ಇನ್ಸ್‌ಪೆಕ್ಟರ್ ವಿಜಯಕೃಷ್ಣ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ನಂತರ ಗ್ರಾಮದ ಹಿರಿಯರ ಜೊತೆ ಮಾತುಕತೆ ನಡೆಸಿ ದೇವಸ್ಥಾನದ ನಿವೇಶನದ ತಗಾದೆ ಇತ್ಯರ್ಥ ಮಾಡುವುದಾಗಿ ಭರವಸೆ ನೀಡಿದರು. ಆದರೂ ಇದಕ್ಕೆ ಒಪ್ಪದ ಗ್ರಾಮಸ್ಥರು ಗ್ರಾಮಕ್ಕೆ ಆಗಮಿಸಿ ಪೊಲೀಸ್ ಇಲಾಖೆ ದೌರ್ಜನ್ಯ ಎಸಗಿದೆ ಎಂದು ಆರೋಪಿಸಿದ್ದಾರೆ.