ಹಾಸನ/ ಸಕಲೇಶಪುರ: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಬೇಕರಿ ಕಟ್ಟಡ ಛಿದ್ರಗೊಂಡು 15-20 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.
ಸಕಲೇಶಪುರ ಪಟ್ಟಣದ ಹೃದಯ ಭಾಗದಲ್ಲಿರುವ ಪುರಸಭಾ ಕಚೇರಿಗೆ ಹೊಂದಿಕೊಂಡಂತಿರುವ ಐಯ್ಯಂಗಾರ್ ಬೇಕರಿಯಲ್ಲಿಂದು ಸಿಲಿಂಡರ್ ಸ್ಫೋಟಗೊಂಡ ಹಿನ್ನೆಲೆ ಬೇಕರಿ ಸಂಪೂರ್ಣ ಸುಟ್ಟು ಕರಕಲಾಗಿದೆ. ರಮೇಶ್ ಎಂಬುವರ ಮಾಲೀಕತ್ವದ ಈ ಬೇಕರಿಯಲ್ಲಿ ಸಿಲಿಂಡರ್ ಸೋರಿಕೆ ಆಗುತ್ತಿದ್ದರಿಂದ ಆ ಸೋರಿಕೆಯನ್ನು ತಡೆಗಟ್ಟಲು ಬೇಕರಿ ಮಾಲೀಕರು ಮತ್ತು ಕೆಲಸಗಾರರು ಪ್ರಯತ್ನಿಸಿದ್ದರು. ಆದ್ರೆ ಸೋರಿಕೆ ಹೆಚ್ಚಾಗಿ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಬೇಕರಿಯ ಕಟ್ಟಡ ಛಿದ್ರಗೊಂಡಿದ್ದು, ಪಕ್ಕದಲ್ಲಿದ್ದ ಸೂಪರ್ ಬಜಾರ್, ವಿಜಯ ಬ್ಯಾಂಕ್, ಶಿಲ್ಪ ಬೇಕರಿ ಹಾಗೂ ಪುರಸಭಾ ಕಚೇರಿಗೂ ಸಾಕಷ್ಟು ಪ್ರಮಾಣದ ಹಾನಿಯಾಗಿದೆ.