ಸಕಲೇಶಪುರ: ವನ್ಯಜೀವಿಗಳಿಂದ ಜನರನ್ನು ರಕ್ಷಿಸುವ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಬೇಕೆಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ಹೇಳಿದರು.
ಪಟ್ಟಣದ ದೊಡ್ಡಕೆರೆ ಆವರಣದಲ್ಲಿ ಶನಿವಾರ ಬೆಳಗ್ಗೆ ಕರ್ನಾಟಕ ಸರ್ಕಾರ ಹಾಗೂ ಅರಣ್ಯ ಇಲಾಖೆಯಿಂದ ವನ್ಯ ಜೀವಿ ಸಂರಕ್ಷಣಾ ಸಪ್ತಾಹದ ನಿಮಿತ್ತ ಸೈಕಲ್ ಜಾಥಾ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಈ ಕಾರ್ಯಕ್ರಮ ಆಚರಿಸುತ್ತಿರುವುದು ಸ್ವಾಗತಾರ್ಹ. ಜನಪ್ರತಿನಿಧಿಗಳು, ಅಧಿಕಾರಿಗಳು, ಜನರ ಸಹಾಯದಿಂದ ವನ್ಯಜೀವಿಗಳ ಸಂಖ್ಯೆ ಹೆಚ್ಚಳ ಆಗುತ್ತಿರುವುದು ಒಳ್ಳೆಯದು. ಜೊತೆಗೆ ವನ್ಯಜೀವಿಗಳಿಂದ ಜನರನ್ನು ರಕ್ಷಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಸರ್ಕಾರ ಇದಕ್ಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಕಾಡಿನ ಪ್ರಾಣಿಗಳು ನಾಡಿಗೆ ಬರದಂತೆ ಮಾಡಬೇಕು. ಕಾಡಿನಲ್ಲೇ ಮೇವುಗಳನ್ನು ಬೆಳೆಸಿ ಕಾಡು ಪ್ರಾಣಿಗಳಿಗೆ ಆಹಾರದ ಕೊರತೆ ಇಲ್ಲದಂತೆ ನೋಡಿಕೊಳ್ಳಬೇಕು. ಕಾಡಾನೆ ಸಮಸ್ಯೆ ಇಡೀ ರಾಜ್ಯದಲ್ಲಿ ಸಕಲೇಶಪುರ ಹಾಗೂ ಆಲೂರು ತಾಲೂಕಿನಲ್ಲಿ ಹೆಚ್ಚಿದೆ. ಪ್ರಾಣ ಹಾನಿ ಬೆಳೆಹಾನಿಯಾಗುತ್ತಿದೆ. ಆದರೆ ಇದಕ್ಕೆ ಇನ್ನು ಶಾಶ್ವತ ಪರಿಹಾರ ಸಿಕ್ಕಿರುವುದಿಲ್ಲ. ಕೂಡಲೆ ಸರ್ಕಾರ ಇದಕ್ಕೆ ಶಾಶ್ವತ ಪರಿಹಾರ ಹುಡಕಬೇಕೆಂದು ಹೇಳಿದರು.