ಹಾಸನ:ಚುನಾವಣೆಗಳಲ್ಲಿ ಗೆಲುವು ಮತ್ತು ಸೋಲಿಗೆ ಕಾರಣ ಇರುತ್ತೆ. ಸಿಂದಗಿಯಲ್ಲಿ 31 ಸಾವಿರ ಅಂತರದಿಂದ ಗೆದ್ದಿದ್ದೇವೆ. ಅದನ್ನು ನೋಡಿದಾಗ ಗೆಲುವಿನ ಅಲೆ ಬಿಜೆಪಿ ಪರ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ತಿಳಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿಕೆ ಹಾಸನಾಂಬೆ ದೇವಿ ದರ್ಶನಕ್ಕೆ ಕೊನೆ ದಿನವಾದ್ದರಿಂದ ಇಂದು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಹಾನಗಲ್ನಲ್ಲಿ ಕಾಂಗ್ರೆಸ್ಗೆ ಗೆಲುವು ಆಗಿದೆ ಅಂತಾ ಬೀಗುವ ಹಾಗಿಲ್ಲ. ಕಾಂಗ್ರೆಸ್ ಪರವಾಗಿ ಅಲೆ ಇದ್ರೆ ಅವರು ಸಿಂಧಗಿಯಲ್ಲೂ ಗೆಲ್ಲಬೇಕಿತ್ತು. ಏಕೆ ಗೆಲ್ಲಲಿಲ್ಲ? ಎಂದರು.
ಹಾನಗಲ್ನಲ್ಲಿ ಮಾನೆ ಪರವಾಗಿ ಅಲೆ ಇತ್ತು. ಕಳೆದ ಚುನಾವಣೆಯಲ್ಲಿ ಸೋತ ದಿನದಿಂದ ಅಲ್ಲಿ ಅವರು ಕೆಲಸ ಮಾಡುತ್ತಿದ್ದರು. ಅದು ಅವರನ್ನು ಕೈ ಹಿಡಿದಿದೆ. ಬಿಜೆಪಿಯೂ ಕೂಡ 80 ಸಾವಿರಕ್ಕೂ ಹೆಚ್ಚು ಮತ ಪಡೆದಿದೆ ಎಂದು ಗೆಲುವು-ಸೋಲಿನ ಬಗ್ಗೆ ಸಮರ್ಥನೆ ಮಾಡಿಕೊಂಡರು.
ಹಾಸನಾಂಬೆ ದೇವಿ ದರ್ಶನ ಪಡೆದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ಉದಾಸಿ ಅವರ ಸ್ಥಾನವನ್ನು ತಕ್ಷಣ ತುಂಬೋದಕ್ಕೆ ನಮ್ಮ ಕೈಯಲ್ಲಿ ಸಾಧ್ಯವಾಗಲಿಲ್ಲ. ಬಿಜೆಪಿಯಲ್ಲಿ ಒಳ ಜಗಳವಿಲ್ಲ. ಕಳೆದ ಬಾರಿ ಉದಾಸಿ ಅವರು ತೆಗೆದುಕೊಂಡಿದ್ದಕ್ಕಿಂತ ಹೆಚ್ಚು ಓಟು ತೆಗೆದುಕೊಂಡಿದ್ದೇವೆ. ನಮಗಿಂತ ಮಾನೆಯವರು ಜಾಸ್ತಿ ಓಟು ತಗೊಂಡ್ರು ಅಷ್ಟೇ.
ಗೆಲುವಿಗೆ ಮಾತ್ರ ನೂರಾರು ಜನ ಅಪ್ಪಂದಿರು, ಗೆಲುವು ಪಾರ್ಟಿದು, ಸೋಲು ಪಾರ್ಟಿದು. ಹಿಂದಗಡೆ ತುತ್ತೂರಿ ಊದುವವರು ಬಹಳ ಜನ ಇರ್ತಾರೆ. ಸೋಲು ಯಾವತ್ತೂ ಅನಾಥ. ನಾವು ಒಂದು ಪಕ್ಷವಾಗಿ ಗೆದ್ದಾಗ ಬೀಗಿಲ್ಲ. ಸೋತಾಗ ಕುಗ್ಗಿಲ್ಲ. ಸಮಾನ ಮನಸ್ಸಿನಿಂದ ಸ್ವೀಕಾರ ಮಾಡಿದ್ದೇವೆ. ನಮ್ಮದೇನಾದ್ರು ತಪ್ಪುಗಳಾಗಿದ್ದರೆ ತಿದ್ದಿಕೊಳ್ಳುತ್ತೇವೆ ಎಂದರು.
ಇಂಧನದ ಬೆಲೆ ಇಳಿಕೆ ದೀಪಾವಳಿ ಗಿಫ್ಟ್ ಅಲ್ಲ. ಜನರ ಋಣ ತೀರಿಸುವಂತಹ ಕೆಲಸವನ್ನು ಪ್ರಧಾನಮಂತ್ರಿ ಮೋದಿಯವರು ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.
ಬಿಜೆಪಿಯಲ್ಲಿ ಯಾವುದೇ ಬಣ ರಾಜಕೀಯವಿಲ್ಲ. ಯಡಿಯೂರಪ್ಪ ಅವರು ನನಗಿಂತ ಮುಂಚೆ ಆರ್ಎಸ್ಎಸ್ ಸ್ವಯಂಸೇವಕರು. ಅವರನ್ನ ಬೇರೆ ಬಣ ಅಂತಾ ಹೇಳುತ್ತೀರಾ ಅಂದರೆ ನಿಮಗಿನ್ನು ಆರ್ಎಸ್ಎಸ್ ಬಗ್ಗೆ ಆಳವಾದ ಜ್ಞಾನ ಇದ್ದಂಗಿಲ್ಲ. ಕಾಂಗ್ರೆಸ್ನಲ್ಲಿ ಖರ್ಗೆ, ಪರಮೇಶ್ವರ್, ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಅವರದ್ದು ಒಂದು ಬಣ ಎಂದು ಟಾಂಗ್ ಕೊಟ್ಟರು.
ಕೆಳಗಡೆ ಮರಿ ಲೀಡರ್ಗಳದ್ದೆಲ್ಲ ಹಲವು ಬಣಗಳು, ಆ ಬಣಗಳದ್ದೇ ರಾಜಕಾರಣ. ಹಾಗಾಗಿ ಅವರು ಹಾಗೇ ಹೇಳ್ತಾರೆ. ನಮ್ಮಲ್ಲಿ ಒಂದೇ ಕಮಲ ಬಣ, ಬಾಜಪ ಬಣ, ನಾವೆಲ್ಲರೂ ಬಾಜಪ. ಒಳಗೊಂದು, ಹೊರಗೊಂದು ಇಲ್ಲ. ನಾವೇನಿದ್ದರೂ ಕಮಲ ಪರವಾಗಿ ಓಟು ಕೇಳೋದು. ಒಂದೊಂದು ಚುನಾವಣೆಗೆ ಒಂದೊಂದು ಸಿಂಬಲ್ಗೆ ಏನಾದ್ರು ಓಟು ಕೇಳಿದ್ದೀವಾ? ಕೇಳಿಲ್ಲ. ಏನಿದ್ದರೂ ನಮ್ಮದು ಕಮಲವೇ. ಬೇರೇ ಏನು ಇಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ಓದಿ:ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆ ಇಳಿಕೆ ಜಾರಿ: ಹೀಗಂದ್ರು ರಾಜ್ಯದ ಜನ..