ಹಾಸನ: ಡಿಪಿಆರ್ನಲ್ಲಿ ಸೇರಿದ್ದ 28 ಕೆರೆಗಳನ್ನು ಸರ್ಕಾರಕ್ಕೆ ಒತ್ತಡ ತರುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ನೀರಾವರಿ ಯೋಜನೆಯನ್ನು ಬದಲಾವಣೆ ಮಾಡುತ್ತಿದ್ದಾರೆ ಎಂದು ಶಾಸಕ ಶಿವಲಿಂಗೇಗೌಡ ಗಂಭೀರವಾಗಿ ಆರೋಪ ಮಾಡಿದ್ದಾರೆ.
ಅರಸೀಕೆರೆ ತಾಲೂಕು ಕೃಷ್ಣ ನದಿ ಪಾತ್ರಕ್ಕೆ ಸೇರಿದ್ದು, ಇಲ್ಲಿಂದ ಚಿಕ್ಕಮಗಳೂರಿಗೆ ಪೈಪ್ ಲೈನ್ ಹೋಗುತ್ತದೆ. ತಾಲೂಕಿನ ಕಣಕಟ್ಟೆ ಮೂಲಕ ಚಿಕ್ಕಮಗಳೂರಿಗೆ ಭದ್ರಾ ಮೇಲ್ದಂಡೆಯಿಂದ ನೀರು ಹರಿಸುತ್ತಿದ್ದಾರೆ. ಈ ಬಗ್ಗೆ ಡಿಪಿಆರ್ನಲ್ಲಿ ಅರಸೀಕೆರೆಯ 28 ಕೆರೆಗಳು ಸಹ ಸೇರಿದ್ದವು. ಆದರೆ ಈಗ ಡಿಪಿಆರ್ನಲ್ಲಿ ನಮ್ಮ ತಾಲೂಕಿನ ಕೆರೆಗಳನ್ನು ಉದ್ದೇಶಪೂರ್ವಕವಾಗಿ ಕೈ ಬಿಟ್ಟಿದ್ದಾರೆ ಎಂದು ಆರೋಪ ಮಾಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಶಿವಲಿಂಗೇಗೌಡ 28 ಕೆರೆಗಳಲ್ಲಿ ಕೇವಲ ಒಂದು ಕೆರೆ ಮಾತ್ರ ಯೋಜನೆಗೆ ಬರುವಂತೆ ಸೇರಿಸಿದ್ದು, ಚಿಕ್ಕಮಗಳೂರಿನ ಕಂಟ್ರೋಲ್ ಮಾಸ್ಟರ್ ಸಿ.ಟಿ ರವಿ ಯೋಜನೆಯನ್ನೇ ಬದಲಾವಣೆ ಮಾಡಿಸಿ, ನಮ್ಮ ತಾಲೂಕಿನ ಜನರಿಗೆ ಅನ್ಯಾಯ ಮಾಡಿದ್ದಾರೆ. ಈಗಾಗಲೇ ಸಿಎಂಗೆ ಹಲವು ಬಾರಿ ಮನವಿ ಮಾಡಿದ್ದೇನೆ. ಕೆರೆಗಳಿಗೆ ನೀರು ಕೊಡುತ್ತೇನೆ ಎಂದು ಹೇಳಿ ಈವರೆಗೂ ಯಾವುದೇ ಕೆಲಸವನ್ನು ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿ.ಟಿ ರವಿ ಮೈತ್ರಿ ಸರ್ಕಾರದ ಮಾಸ್ಟರ್ ಪ್ಲಾನ್ ಅನ್ನು ಬದಲಾವಣೆ ಮಾಡುವ ಮೂಲಕ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ಪಕ್ಷದ ವರಿಷ್ಠರ ಗಮನಕ್ಕೆ ತಂದು ಮುಂದೆ ಯಾವ ರೀತಿಯಾದ ಹೋರಾಟ ಮಾಡಬೇಕೆಂದು ಸಲಹೆ ಪಡೆದು ತಾಲೂಕಿನಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುವುದಾಗಿ ಹೇಳಿದರು.