ಅರಕಲಗೂಡು:ಅಸಂಘಟಿತ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ನೀಡಿದ್ದ ಆಹಾರದ ಕಿಟ್ ವಿತರಣೆ ವೇಳೆ ನೂಕುನುಗ್ಗಲು ಉಂಟಾಗಿದ್ದರಿಂದ ಆಹಾರದ ಕಿಟ್ಗಳನ್ನು ವಿತರಿಸಲು ಅಧಿಕಾರಿಗಳು ಹರಸಾಹಸಪಟ್ಟ ಘಟನೆ ನಡೆಯಿತು.
ಪಟ್ಟಣದ ಶಿಕ್ಷಕರ ಭವನದಲ್ಲಿ ಶುಕ್ರವಾರ ಕಾರ್ಮಿಕ ಇಲಾಖೆ ಆಯೋಜಿಸಿದ್ದ ಆಹಾರದ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ತಾಲೂಕಿನ ಮೂರು ಸಾವಿರ ಕಟ್ಟಡ ಕಾರ್ಮಿಕರು ಹಾಗೂ ಎರಡು ಸಾವಿರ ಅಸಂಘಟಿತ ಕಾರ್ಮಿಕರಿಗೆ ಆಹಾರದ ಕಿಟ್ ವಿತರಣೆ ಮಾಡುವ ಸಲುವಾಗಿ ಮೊದಲೇ ಕೂಪನ್ಗಳನ್ನು ನೀಡಲಾಗಿತ್ತು.
ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಕೇವಲ 8 ಜನರಿಗೆ ವಿತರಣೆ ಮಾಡಿ ಉಳಿದವರಿಗೆ ಅಧಿಕಾರಿಗಳು ಶಿಕ್ಷಕರ ಭವನದ ಹೊರಗೆ ವಿತರಿಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ವೇದಿಕೆಯಲ್ಲಿ ವಿತರಣೆಗೆ ಶಾಸಕ ಎ.ಟಿ.ರಾಮಸ್ವಾಮಿ ಅವರು ಕಿಟ್ ವಿತರಿಸಲು ಆರಂಭಿಸುತ್ತಿದ್ದಂತೆಯೇ ವೇದಿಕೆಯ ಮುಂದಿದ್ದವರು ವೇದಿಕೆಯನ್ನೇರಿದರು. ಇದನ್ನು ಕಂಡ ಇತರರೂ ವೇದಿಕೆಯತ್ತ ನುಗ್ಗಿದಾಗ ನೂಕು ನುಗ್ಗಲು ಉಂಟಾಯಿತು.