ಹಾಸನ: ನಗರದಲ್ಲಿ ಇತ್ತೀಚೆಗೆ ಅನ್ಯಕೋಮಿನ ಇಬ್ಬರು ಯುವಕರು ಬೈಕ್ ವ್ಹೀಲಿಂಗ್ ಮಾಡುವ ಮೂಲಕ ನಕಲಿ ಗನ್ ಹಿಡಿದುಕೊಂಡು ಸಂಚಾರ ನಿಯಮ ಉಲ್ಲಂಘಿಸಿರುವುದು ನಗರದಲ್ಲಿ ಆತಂಕ ಸೃಷ್ಟಿಸಿದೆ. ಶುಕ್ರವಾರ ನಕಲಿ ಗನ್ ಹಿಡಿದು ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಇಬ್ಬರು ಅನ್ಯಕೋಮುವಿನ ಯುವಕರನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರದಲ್ಲಿ ಪಿಸ್ತೂಲ್ ಹಿಡಿದು ವಿವಿಧ ರಸ್ತೆಗಳಲ್ಲಿ ಬುಲೆಟ್ ಏರಿ ರೀಲ್ಸ್ ಮಾಡಿ ಆತಂಕ ಸೃಷ್ಟಿಸಿದ್ದ ರಿಯಾಜ್ ಪಾಶ ಮತ್ತು ಮಹಮ್ಮದ್ ಅಲಿ ಎಂಬ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಾಸನದ 80 ಅಡಿ ರಸ್ತೆಯಲ್ಲಿ ಬುಲೆಟ್ ಏರಿ ಇಬ್ಬರು ಯುವಕರು ಸಂಚಾರ ನಿಯಮವನ್ನು ಪಾಲಿಸದೆ ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಾರೆ. ಕೈಯಲ್ಲಿ ಗನ್ ಹಿಡಿದು ಹೆಲ್ಮೆಟ್ ಧರಿಸದೇ ಸಂಚಾರ ಮಾಡಿರುವ ಈ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಂದ ತೀವ್ರ ಟೀಕೆಗೆ ಒಳಗಾಗಿದೆ. ಇವರ ಬೇಕಾಬಿಟ್ಟಿ ಸಂಚಾರದಿಂದ ಸಾರ್ವಜನಿಕ ವಲಯದಲ್ಲಿ ಆತಂಕ, ಆಕ್ರೋಶ ವ್ಯಕ್ತವಾದ ಬಂದ ಹಿನ್ನೆಲೆ, ಕೇವಲ ಒಂದು ಗಂಟೆಯ ಒಳಗೆ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರದಲ್ಲಿ ಇತ್ತೀಚೆಗೆ ಅಪ್ರಾಪ್ತ ವಯಸ್ಸಿನ ಓರ್ವ ಬಾಲಕ ಮತ್ತು ಯುವಕ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ವೇಳೆ ಇಬ್ಬರು ಕಾಲೇಜು ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆಸಿದ್ದರು. ಪರಿಣಾಮ ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬುಧವಾರ ರಾತ್ರಿ ಈ ಅಪಘಾತ ಸಂಭವಿಸಿತ್ತು.