ಹಾಸನ : ವಿಧವೆ ಜೊತೆಗಿನ ಅಕ್ರಮ ಸಂಬಂಧಕ್ಕೆ ವಿರೋಧ ಮಾಡಿದ ಪೋಷಕರಿಗೆ ಪಲಾವ್ನಲ್ಲಿ ವಿಷ ಹಾಕಿ ಕೊಂದ ಆರೋಪಿ ಮಗ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಘಟನೆ ಜಿಲ್ಲೆಯ ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅರಕಲಗೂಡು ತಾಲೂಕಿನ ಬಿಸಿಲಹಳ್ಳಿ ಗ್ರಾಮದ ಮಂಜುನಾಥ್ (27) ಆರೋಪಿಯಾಗಿದ್ದು, ಉಮಾ (48), ನಂಜುಂಡಪ್ಪ (55) ಮೃತ ದಂಪತಿ.
ಆಗಸ್ಟ್ 15 ರಂದು ಮನೆಯಲ್ಲಿ ಊಟ ಮಾಡಿದ ಬಳಿಕ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿತ್ತು. ನಾಲ್ಕು ದಿನಗಳ ಹಿಂದೆ ದಂಪತಿ ಚಿಕಿತ್ಸೆಗೆ ಸ್ವಂದಿಸದೇ ಸಾವಿಗೀಡಾಗಿದ್ದರು. ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ಕಲುಷಿತ ಆಹಾರ ಸೇವಿಸಿ ಅಪ್ಪ-ಅಮ್ಮ ತೀರಿಕೊಂಡರು ಎಂದು ಆರೋಪಿ ಮಗ ಮಂಜುನಾಥ್ ಎಲ್ಲರಿಗೂ ನಂಬಿಸಿದ್ದ. ಪೊಲೀಸರು ಮರು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣದ ಹಿನ್ನೆಲೆ.. ಮೃತ ದಂಪತಿಗೆ ಮಂಜುನಾಥ್ ಎರಡನೇ ಪುತ್ರನಾಗಿದ್ದು, ಈತ ವಿಧವೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ ಮಂಜುನಾಥ್ ತಾಯಿ ಮೃತ ಉಮಾ ಮಗನ ಅಕ್ರಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹಾಗೂ ಸಹಕಾರ ಸಂಘಗಳಲ್ಲಿ ತಾಯಿ ಉಮಾ ಮಾಡಿದ್ದ ಸಾಲದ ಹಣವನ್ನು ಮಂಜುನಾಥ್ ದುರುಪಯೋಗ ಪಡಿಸಿಕೊಂಡಿದ್ದ. ಆದರಿಂದ ಸಾಲದ ಹಣವನ್ನು ನೀಡುವಂತೆ ಪದೇ ಪದೇ ತಾಯಿ ಒತ್ತಾಯಿಸುತ್ತಿದ್ದರು.
ಇದನ್ನೂ ಓದಿ :ಪ್ರಿಯಕರನ ಜೊತೆ ಸೇರಿ ಪತಿ ಹತ್ಯೆ ಮಾಡಿದ ಪತ್ನಿ: ಮೂವರ ಬಂಧನ
ಇದರಿಂದ ಕೋಪಗೊಂಡಿದ್ದ ಮಂಜುನಾಥ್ ತಾಯಿಯ ಹತ್ಯೆಗೆ ಸಂಚು ರೂಪಿಸಿದ್ದ. ಆ.15 ರಂದು ಉಮಾ ಅವರು ಬೆಳಗ್ಗೆ ಪಲಾವ್ ಮಾಡಿದ್ದರು. ಆರೋಪಿ ಮಂಜುನಾಥ್ ತನ್ನ ತಂದೆ, ತಾಯಿಗಿಂತ ಮೊದಲೇ ತಿಂಡಿ ತಿಂದು ಆ ನಂತರ ಪಲಾವ್‌ಗೆ ಕಳೆ ನಾಶಕ ಬೆರೆಸಿದ್ದ. ಅಲ್ಲದೆ ತಂದೆ, ತಾಯಿ ತಿಂಡಿ ತಿಂದ ವೇಳೆ ಔಷಧಿ ವಾಸನೆ ಬರುತ್ತಿದೆ ಎಂದು ವಾಂತಿ ಮಾಡಿ ನಾಟಕವಾಡಿದ್ದ. ಮನೆಯಲ್ಲಿ ತಿಂಡಿ ತಿಂದ ಬಳಿಕ ದಂಪತಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೇ ಕಳೆದ ಆ.24ರ ಗುರುವಾರ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಬರುವ ವೇಳೆ ಇಬ್ಬರೂ ದಿಢೀರ್ ಸಾವಿಗೀಡಾಗಿದ್ದಾರೆ. ಈ ಘಟನೆಯಿಂದ ಅನುಮಾನಗೊಂಡ ಕಿರಿಯ ಪುತ್ರ ತಂದೆ-ತಾಯಿಯ ಹಠಾತ್ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ದೂರು ದಾಖಲಿಸಿಕೊಂಡು ತನಿಖೆಗೆ ಮುಂದಾದ ಪೊಲೀಸರು ಗುರುವಾರ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದ ವೇಳೆ ಗ್ರಾಮಕ್ಕೆ ಆಗಮಿಸಿ ಅಂತ್ಯಕ್ರಿಯೆ ತಡೆದು ಕುಟುಂಬ ಸದಸ್ಯರ ಮನವೊಲಿಸಿ ಮೃತದೇಹಗಳ ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ. ಈ ವೇಳೆ ಮಂಜುನಾಥ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಪೋಷಕರನ್ನು ತಾನೇ ಕೊಲೆ ಮಾಡಿರುವ ಸತ್ಯ ಬಯಲಾಗಿದೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ :ಒಂದೇ ಕುಟುಂಬದ ನಾಲ್ವರ ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆ.. ಮೈಸೂರಿನಲ್ಲಿ ಹೃದಯ ವಿದ್ರಾವಕ ಘಟನೆ