ಅರಸೀಕೆರೆ (ಹಾಸನ) : ಮೊಬೈಲ್ನಲ್ಲಿ ಮಾತನಾಡುವಾಗ ಪತ್ನಿಗೆ ಬೈದದ್ದನ್ನು ತನಗೇ ಬೈದಿದ್ದೆಂದು ತಪ್ಪಾಗಿ ಭಾವಿಸಿ ವೃದ್ಧನೋರ್ವ ತನ್ನ ಸಹೋದರನ ಮಗನನ್ನೇ ಚೂರಿಯಿಂದ ಇರಿದು ಕೊಲೆಗೈದಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ದುಮ್ಮೇನಹಳ್ಳಿಯಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಯತೀಶ್ (37) ಎಂದು ಗುರುತಿಸಲಾಗಿದೆ. ಹನುಮಂತಯ್ಯ ಆರೋಪಿ.
ಘಟನೆಯ ವಿವರ: ಕಳೆದ ಜೂನ್ 4ರ ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಯತೀಶ್ ತನ್ನ ಮಡದಿಗೆ ಕರೆ ಮಾಡಿ, ಶಾಲೆ ಪ್ರಾರಂಭವಾದರೂ ಮಕ್ಕಳನ್ನು ಕರೆದುಕೊಂಡು ತವರಿಗೆ ಹೋದ ಮಡದಿ ಇನ್ನೂ ಬರಲಿಲ್ಲವಲ್ಲ ಎಂದು ಕರೆ ಮಾಡಿ ಬೈಯುತ್ತಿದ್ದ. ಮನೆ ಒಳಗಿದ್ದ ದೊಡ್ಡಪ್ಪ ಹನುಮಂತಯ್ಯ ಈತ ನನಗೇ ಬೈಯುತ್ತಿರುವುದಾಗಿ ತಪ್ಪಾಗಿ ಭಾವಿಸಿ ಏಕಾಏಕಿ ಚೂರಿಯಿಂದ ಯತೀಶನ ಎದೆಗೆ ಚುಚ್ಚಿದ್ದಾನೆ. ಗಂಭೀರ ಗಾಯಗೊಂಡ ಯತೀಶ್ ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ. ತಕ್ಷಣ ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಹಾಸನ ಆಸ್ಪತ್ರೆಗೆ ಸೂಚಿಸಿದ್ದು, ಅಲ್ಲಿಗೆ ಸಾಗಿಸುವ ದಾರಿ ಮಧ್ಯೆ ಯತೀಶ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿ ಹನುಮಂತಯ್ಯನ ಮಡದಿ ಕಳೆದ ಒಂದು ವರ್ಷದ ಹಿಂದೆ ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದರು. ಆರೋಪಿ ಕುಡಿತಕ್ಕೆ ದಾಸನಾಗಿದ್ದ. ಅಲ್ಲದೆ ಪ್ರತಿದಿನ ಕುಡಿದು ಅಕ್ಕ ಪಕ್ಕದ ಮನೆಯವರೊಂದಿಗೆ ಕಿರಿಕ್ ಮಾಡುತ್ತಿದ್ದ. ಇದನ್ನು ತಮ್ಮನ ಮಗನಾದ ಯತೀಶ್ ಪ್ರಶ್ನೆ ಮಾಡಿದ್ದ. ಅಷ್ಟೇ ಅಲ್ಲದೆ, ಪ್ರತಿನಿತ್ಯ ಈ ರೀತಿ ಕುಡಿದು ಗಲಾಟೆ ಮಾಡ್ಬೇಡಿ, ಈಗಾಗಲೇ ನಿಮಗೆ ವಯಸ್ಸಾಗಿದೆ. ಯಾಕೆ ಈತರ ಎಲ್ಲರಿಗೂ ತೊಂದರೆ ಕೊಡುತ್ತೀರಿ ಎಂದು ಬುದ್ಧಿವಾದ ಹೇಳಿದ್ದ.
ಇದನ್ನೂ ಓದಿ :ಬಾರ್ ಕ್ಯಾಷಿಯರ್ ಕೊಲೆ ಪ್ರಕರಣ: ಓರ್ವನ ಕಾಲಿಗೆ ಗುಂಡೇಟು, ಇಬ್ಬರ ಬಂಧನ