ಹೊಳೆನರಸೀಪುರ (ಹಾಸನ):ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿರುವ ಘಟನೆ ಹೊಳೆನರಸೀಪುರ ತಾಲೂಕಿನ ತಿರುಮನಹಳ್ಳಿಯಲ್ಲಿ ನಡೆದಿದೆ. ಆಸ್ತಿ ವಿಚಾರವಾಗಿ ಪತಿ ಶ್ರೀನಿವಾಸ್ ವಿರುದ್ಧ ಪತ್ನಿ ಸವಿತಾ ಕೇಸ್ ದಾಖಲಿಸಿದ್ದು, ಕೋರ್ಟ್ ನಲ್ಲಿ ವಿಚಾರಣೆ ಮುಂದುವರಿದಿತ್ತು. ಸವಿತಾ ಪತಿ ಬಳಿ ಜೀವನಾಂಶಕ್ಕೆ ಬೇಡಿಕೆಯಿಟ್ಟಿದ್ದರು. ಇದೇ ವಿಚಾರದಲ್ಲಿ ನಿನ್ನೆ ಜಗಳ ತೆಗೆದು ಪತ್ನಿ ಮೇಲೆ ಶ್ರೀನಿವಾಸ್ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ತನ್ನ ಪತ್ನಿ ಮೇಲೆ ಪತಿ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಏನಿದು ಘಟನೆ?: ಸವಿತಾ ಮತ್ತು ಶ್ರೀನಿವಾಸ್ ಮದುವೆಯಾದ ಕೆಲ ವರ್ಷಗಳ ಬಳಿಕ ಇಬ್ಬರು ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದರು. ಗಂಡನ ಸಹವಾಸವೇ ಬೇಡ ಎಂದು ತೀರ್ಮಾನ ಮಾಡಿದ್ದ ಪತ್ನಿ ಸವಿತಾ ಸಂಸಾರ ನಡೆಸೋಕೆ ಪತಿಯ ಬಳಿ ಜೀವನಾಂಶಕ್ಕೆ ಬೇಡಿಕೆಯಿಟ್ಟು, ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡುತ್ತಿದ್ದರು. ನ್ಯಾಯಾಲಯದಲ್ಲಿ ಪ್ರಕರಣ ಇರುವಾಗಲೇ ನಿನ್ನೆ(ಶನಿವಾರ) ಸವಿತಾ ಮತ್ತು ಅವರ ತಂಗಿ ಅಂದ್ರೆ ಶ್ರೀನಿವಾಸಸ್ ನಾದಿನಿ ಊರಿಗೆ ಬಂದು ಪ್ರಕರಣದ ಸಂಬಂಧ ಮಾತನಾಡುತ್ತಿದ್ದರು.
ಈ ವೇಳೆ ಏಕಾಏಕಿ ಮಾರಕಾಸ್ತ್ರ ತಂದ ಪತಿ ಶ್ರೀನಿವಾಸ್ ತನ್ನ ಪತ್ನಿ ಸವಿತಾ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಪತ್ನಿ ಮತ್ತು ನಾದಿನಿ ಇಬ್ಬರ ಮೇಲೆ ಹಲ್ಲೆ ಮಾಡಿ ನಡುರಸ್ತೆಯಲ್ಲಿಯೇ ಕೊಲೆಗೆ ಯತ್ನಿಸಿದ್ದಾರೆ. ನಂತರ ನಾದಿನಿಯ ಕಾರಿನ ಮೇಲೂ ದಾಳಿ ಮಾಡಿ ಗಾಜನ್ನು ಒಡೆದು ಹಾಕಿದ್ದಾರೆ. ಸದ್ಯ ಹಲ್ಲೆಗೊಳಗಾದ ಸವಿತಾರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಹೊಳೆನರಸೀಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.