ಹಾಸನ :ಹಳೆಯ ದ್ವೇಷದ ಹಿನ್ನೆಲೆ ಹಾಡಹಗಲೇ ಗ್ರಾನೈಟ್ ಉದ್ಯಮಿಯನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಹಾಸನದ ಹೊರವಲಯದ ಬಳಿ ನಡೆದಿದೆ. ಕೃಷ್ಣೇಗೌಡ (55) ಕೊಲೆಯಾದ ಮೃತ ಗ್ರಾನೈಟ್ ಉದ್ಯಮಿ.
ಹಾಸನ ಮೂಲದ ಕೃಷ್ಣೇಗೌಡ, ಹಾಸನದ ಡೈರಿ ವೃತ್ತದ ಸಮೀಪ ಶ್ರೀರಾಮ ಮಾರ್ಬಲ್ ಎಂಬ ಉದ್ಯಮವನ್ನು ನಡೆಸುತ್ತಿದ್ದರು. ಜೊತೆಗೆ ಜೆಡಿಎಸ್ ಮುಖಂಡರಾಗಿರುವ ಇವರು ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರ ಆಪ್ತರಾಗಿದ್ದರು.
ಇಂದು ಬೆಳಗ್ಗೆ ಎಂದಿನಂತೆ ತಮ್ಮ ಗ್ರಾನೈಟ್ ಫ್ಯಾಕ್ಟರಿಗೆ ಹೋಗಿ ವಾಪಸ್ ತಮ್ಮ ಇನ್ನೋವಾ ವಾಹನವನ್ನು ಹತ್ತಲು ಮುಂದಾದಾಗ, ಕೆಲವು ದುಷ್ಕರ್ಮಿಗಳು ಏಕಾಏಕಿ ಅವರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ.
ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ: ಇಂದು ಹಾಸನ ಗ್ರಾನೈಟ್ ಫ್ಯಾಕ್ಟರಿ ಎದುರುಗಡೆ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ, ಕೆಲವು ಮಾಹಿತಿಗಳನ್ನು ಕಲೆಹಾಕಿದ್ದಾರೆ. ಈ ಸಂಬಂಧ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತನಿಖೆಗೆ ನಾಲ್ಕು ತಂಡ :''ಇವತ್ತು ಮಧ್ಯಾಹ್ನ ಹಾಸನದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಘಟನೆ ನಡೆದಿದೆ. ಕೃಷ್ಣೇಗೌಡ ಎಂಬವರು ಗ್ರಾನೈಟ್ ಫ್ಯಾಕ್ಟರಿ ಮಾಲೀಕರು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಇವರು ಗ್ರಾನೈಟ್ ಫ್ಯಾಕ್ಟರಿಯ ಗೇಟ್ ಓಪನ್ ಮಾಡಲು ಬಂದಿದ್ದರು. ಈ ವೇಳೆ ಸುಮಾರು ನಾಲ್ಕರಿಂದ ಐದು ಜನ ತಲವಾರ್ನಿಂದ ದಾಳಿ ಮಾಡಿ, ಕೊಲೆಗೈದು ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ. ತನಿಖೆಗೆ ನಾಲ್ಕು ತಂಡ ರಚಿಸಿದ್ದೇವೆ. ಸಾರ್ವಜನಿಕರಿಗೆ ಮಾಹಿತಿ ಇದ್ದರೆ ನನ್ನ ಗಮನಕ್ಕೆ ತರಬಹುದು. ಹಾಸನ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ'' ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದರು.
ಸ್ನೇಹಿತನ ಕೊಲೆಗೈದ ಇಬ್ಬರು ಆರೊಪಿಗಳು ಸೆರೆ: ಮದ್ಯ ಸೇವನೆ ಮಾಡಿರುವ ಸಂಗತಿಯನ್ನು ತಂದೆಗೆ ಹೇಳಿರುವುದಕ್ಕೆ ಆಕ್ರೋಶಗೊಂಡು ತನ್ನ ಸ್ನೇಹಿತನನ್ನೇ ಇಬ್ಬರು ಯುವಕರು ಹತ್ಯೆಗೈದಿರುವ ಘಟನೆ ಹಾಸನದಲ್ಲಿ ಕಳೆದ ಜು. 31 ರಂದು ನಡೆದಿದೆ ಎಂದು ಎಸ್ಪಿ ಹರಿರಾಮ್ ಶಂಕರ್ (ಆಗಸ್ಟ್ 7-2023) ತಿಳಿಸಿದ್ದರು. ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದ ಅವರು, ಪ್ರಕಾಶ್ (32) ಕೊಲೆಯಾದ ದುರ್ದೈವಿ. ಪುನೀತ್ ಮತ್ತು ಯಶವಂತ್ ಕೊಲೆ ಮಾಡಿದ ಆರೋಪಿಗಳು ಎಂದು ಮಾಹಿತಿ ನೀಡಿದ್ದರು.
ಪ್ರಕರಣದ ವಿವರ ಹೀಗಿದೆ :ಹಾಸನ ತಾಲೂಕಿನ ಚಿಕ್ಕಗೆಣಿಗೆರೆ ಗ್ರಾಮದಲ್ಲಿ ಕೊಲೆಯಾದ ಪ್ರಕಾಶ್, ಆರೋಪಿಗಳಾದ ಪುನೀತ್, ಯಶವಂತ್ ಎಂಬ ಮೂವರು ಸ್ನೇಹಿತರು ಮದ್ಯಪಾನ ಮಾಡುತ್ತಿದ್ದರು. ಇದೇ ವೇಳೆ ಪುನೀತ್ ತಂದೆ ಕರೆ ಮಾಡಿ ನನ್ನ ಮಗ ಎಲ್ಲಿದ್ದಾನಪ್ಪ ಎಂದು ಕೇಳಿದ್ದಾರೆ. ಆಗ ಕುಡಿದ ಮತ್ತಿನಲ್ಲಿ ಪ್ರಕಾಶ್, ನಿಮ್ಮ ಮಗ ಮದ್ಯ ಸೇವಿಸುತ್ತಿದ್ದಾನೆ ಎಂದು ಪುನೀತ್ ಎಂಬವರ ತಂದೆಗೆ ಮಾಹಿತಿ ನೀಡಿದ್ದ.
ಇದರಿಂದ ಪುನೀತ್ ತಂದೆ ಕೋಪಗೊಂಡಿದ್ದರು. ಮದ್ಯಪಾನ ಮಾಡಿ ಮನೆಗೆ ಬಂದ ಪುನೀತ್ನನ್ನು ತಂದೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದರು. ಇದರಿಂದ ಕೋಪಗೊಂಡ ಪುನೀತ್ ವಿಚಾರವನ್ನು ಸ್ನೇಹಿತ ಯಶವಂತ್ಗೆ ತಿಳಿಸಿದ್ದ. ಬಳಿಕ ಇಬ್ಬರೂ, ಸ್ನೇಹಿತ ಪ್ರಕಾಶ್‌ನನ್ನು ಮನೆಯಿಂದ ಹೊರಗೆ ಕರೆಸಿಕೊಂಡು ಬಂದು ಗಂಭೀರವಾಗಿ ಹಲ್ಲೆ ಮಾಡಿದ್ದರು.
ಇದನ್ನೂ ಓದಿ:Hassan crime: ಮದ್ಯ ಸೇವಿಸಿದ ವಿಷಯವನ್ನು ತಂದೆಗೆ ತಿಳಿಸಿದ ಸ್ನೇಹಿತನ ಕೊಲೆ; ಇಬ್ಬರು ಸೆರೆ