ಹಾಸನ/ಸಕಲೇಶಪುರ: ಜಗಳ ಬಿಡಿಸಲು ಹೋದ ಪೊಲೀಸ್ ಕಾನ್ಸ್ಸ್ಟೇಬಲ್ ಮೇಲೆಯೇ ಪುಂಡರ ಗುಂಪೊಂದು ಲಾಂಗ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನಲ್ಲಿ ನಡೆದಿದೆ. ಇಲ್ಲಿನ ಎಸ್. ಹೊನ್ನೇನಹಳ್ಳಿ ಗ್ರಾಮದ ಶರತ್ ಎಂಬವರೇ ಗಂಭೀರ ಗಾಯಗೊಂಡ ಪೊಲೀಸ್ ಪೇದೆ ಎಂದು ತಿಳಿದುಬಂದಿದೆ.
ಶರತ್ ಅವರು ಸಕಲೇಶಪುರ ತಾಲೂಕಿನ ಯಸಳೂರು ಪೊಲೀಸ್ ಠಾಣೆಯಲ್ಲಿ ಕಾನ್ಸ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೂ.15 ರಂದು ಶರತ್ ಅವರು ಸಾಂದರ್ಭಿಕ ರಜೆ ಪಡೆದಿದ್ದರು. ಬಳಿಕ ಗ್ರಾಮದ ದೀಪಕ್ ಎಂಬುವವರ ಮಗಳ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆಂದು ಹೊಳೆನರಸೀಪುರ ತಾಲ್ಲೂಕಿನ ಮಳಲಿ ದೇವಸ್ಥಾನಕ್ಕೆ ಆಗಮಿಸಿದ್ದರು. ಈ ವೇಳೆ ಮಧ್ಯಾಹ್ನ 3.30ರ ಸುಮಾರಿಗೆ ದೇವಸ್ಥಾನದ ಸಮೀಪವಿರುವ ಸೋನಾ ಶ್ರೇಯಾ ಕನ್ವೆಕ್ಷನ್ ಹಾಲ್ ಮುಂಭಾಗ ಶರತ್ ಅವರ ಗ್ರಾಮದವರೇ ಆದ ಮಿಥುನ್, ಲೋಹಿತ್, ನಟರಾಜು ಎಂಬುವವರು ಚೇತನ್ ಎಂಬ ಯುವಕನಿಗೆ ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಾರೆ. ಅಲ್ಲದೆ ಹಲ್ಲೆ ನಡೆಸುತ್ತಿರುವ ವೇಳೆ ಜಗಳ ಬಿಡಿಸಲು ಶರತ್ ಮಧ್ಯ ಪ್ರವೇಶ ಮಾಡಿದ್ದಾರೆ.
ಈ ವೇಳೆ ಜಗಳ ಬಿಡಿಸಲು ಬಂದ ಶರತ್ ಅವರಿಗೂ ಪುಂಡರ ಗುಂಪು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಹಲ್ಲೆ ನಡೆಸಿದೆ. ಅಲ್ಲದೆ ನಟರಾಜ ಎಂಬಾತ ಕಲ್ಲಿನಿಂದ ಶರತ್ ತಲೆಯ ಹಿಂಭಾಗಕ್ಕೆ ಹಲ್ಲೆ ನಡೆಸಿದ್ದಲ್ಲದೆ, ಕಾರಿನಲ್ಲಿದ್ದ ಲಾಂಗ್ ತಂದು ಶರತ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳಿಂದ ತಪ್ಪಿಸಿಕೊಂಡ ಶರತ್ ಕನ್ವೆನ್ಷನ್ ಹಾಲ್ ಒಳಗೆ ಓಡಿ ಹೋಗಿದ್ದಾರೆ. ಅಲ್ಲಿಗೂ ಅಟ್ಟಿಸಿಕೊಂಡು ಬಂದ ಆರೋಪಿಗಳು ಅಲ್ಲಿಯೂ ಹಲ್ಲೆ ಮಾಡಿದ್ದಾರೆ. ಈ ವೇಳೆ ಗಂಭೀರ ಗಾಯಗೊಂಡ ಶರತ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.