ಹಾಸನ: ಕೋವಿಡ್ ಸೋಂಕಿನಿಂದ ಕೋಟ್ಯಾಂತರ ಜನ ದುಡಿಯುವ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಇತ್ತ ನಿರುದ್ಯೋಗ, ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿದೆ. ಕೇಂದ್ರ ಸರ್ಕಾರದ ಈ ನಿರ್ಲಕ್ಷ್ಯ ಧೋರಣೆ ಖಂಡಿಸಿ, ಕೂಡಲೇ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಿಪಿಎಂ ಜಿಲ್ಲಾ ಸಮಿತಿ ಆಗ್ರಹಿಸಿತು.
ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಸಿಪಿಎಂ ಪ್ರತಿಭಟನೆ ನಗರದ ಹೇಮಾವತಿ ಪ್ರತಿಮೆ ಬಳಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ದೇಶದಲ್ಲಿ ಕೋವಿಡ್ ಹಾವಳಿ ಹೆಚ್ಚಾಗುತ್ತಲೇ ಇದೆ. ಕೊರೊನಾ ಸೋಂಕು ನಿಯಂತ್ರಣ ಮಾಡಲು ಲಾಕ್ಡೌನ್ ವಿಧಿಸಲಾಗಿತ್ತು. ಇದರಿಂದ ದೇಶದ ಆರ್ಥಿಕತೆಗೆ ಕೊಡಲಿ ಪೆಟ್ಟು ಬಿದ್ದಿದೆ. ಇದರಿಂದ ಯಾವುದೇ ನಿಯಂತ್ರಣ ಕಾರ್ಯವಾಗಲಿಲ್ಲ. ಒಳ್ಳೆಯ ದಿನಗಳ ಭವಿಷ್ಯ ನುಡಿಯುತ್ತಿದ್ದ ಪ್ರಧಾನಿ ಮೋದಿ ತಮ್ಮ ವೈಫಲ್ಯ ಮರೆಮಾಚಲು ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ ಎಂದು ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಧರ್ಮೇಶ್ ಆರೋಪಿಸಿದರು.
ಲಾಕ್ಡೌನ್ ದೇಶದ ಬಹುಪಾಲು ಜನಗಳ ಮೇಲೆ, ಅದರಲ್ಲೂ ದಲಿತರು, ಬುಡಕಟ್ಟು ಜನಗಳು, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ವಿಕಲಾಂಗರ ಮೇಲೆ ದುಷ್ಪರಿಣಾಮ ಬೀರಿದೆ. ಇದುವರೆಗೂ ಅವರ ನೆರವಿಗೆ ಕೇಂದ್ರ ಸರ್ಕಾರ ಮುಂದಾಗಿಲ್ಲ. ಕೂಡಲೇ ಅಂತಹ ಕುಟುಂಬಗಳಿಗೆ ಪರಿಹಾರ ಮತ್ತು ದಿನಸಿ ವಿತರಿಸಬೇಕು ಎಂದು ಒತ್ತಾಯಿಸಿದರು.
ಆಯಾ ರಾಜ್ಯಗಳ ಮೇಲೆ ಕೊರೊನಾ ಹೊಣೆಯ ಜವಾಬ್ದಾರಿಯನ್ನು ರವಾನಿಸಿ, ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಹಾಯ ಮಾಡಲು ಮೀನಮೇಷ ಎಣಿಸುತ್ತಿದೆ ಎಂದು ಕುಟುಕಿದರು.
ಕೊರೊನಾ ಬರುವ ಮೊದಲೇ ಸಂಕಷ್ಟ:ದೇಶವನ್ನು ಕೊರೊನಾ ಆಕ್ರಮಿಸುವ ಮೊದಲೇ ಕೇಂದ್ರದ ಆರ್ಥಿಕ ನೀತಿಗಳಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಜಾರತೊಡಗಿತ್ತು. ಗಾಯದ ಮೇಲೆ ಬರೆ ಎಳೆದಂತೆ ಕೊರೊನಾ ಸೋಂಕು ವಕ್ಕರಿಸಿತು. ಇಂತಹ ಸನ್ನಿವೇಶದಲ್ಲಿ ಸಾರ್ವಜನಿಕ ಹೂಡಿಕೆಗಳನ್ನು ಹೆಚ್ಚಿಸಿ, ಸಾರ್ವಜನಿಕ ರಂಗಗಳನ್ನು ಬಲಪಡಿಸಿ, ಹೊಸ ಉದ್ಯೋಗಗಳನ್ನು ಸೃಷ್ಟಿಸಬೇಕು. ಆದಾಯ, ಭದ್ರತೆ ಹೆಚ್ಚಿಸುವ ಜವಾಬ್ದಾರಿ ಸರ್ಕಾರಗಳದ್ದು. ಆದರೆ, ಮೋದಿ ಸರ್ಕಾರ ರೈಲ್ವೆ, ವಿದ್ಯುತ್, ಬಿಎಸ್ಎನ್ಎಲ್, ಕಲ್ಲಿದ್ದಲು, ಪೆಟ್ರೋಲಿಯಂ, ಬ್ಯಾಂಕಿಂಗ್, ವಿಮೆ ಮೊದಲಾದ ಹಣಕಾಸು ವಲಯವನ್ನು ಖಾಸಗೀಕರಣ ಮಾಡಿ, ದೇಶದ ಆಸ್ತಿಯನ್ನು ಲೂಟಿ ಮಾಡಲು ಲಾಭಕೋರ ಕಾರ್ಪೋರೇಟ್ (ಬಂಡವಾಳಶಾಹಿ) ಕಂಪನಿಗಳಿಗೆ ಮಾರಾಟ ಮಾಡುತ್ತಿದೆ ಎಂದು ಕಿಡಿಕಾರಿದರು.