ಹಾಸನ: ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮತ್ತು ಶಾಲಾ-ಕಾಲೇಜುಗಳಿಗೆ ಕಡ್ಡಾಯವಾಗಿ ಹಾಜರಾಗಲೇಬೇಕು ಎಂಬ ನಿಯಮವಿಲ್ಲ. ಮಕ್ಕಳು ಮನೆಯಲ್ಲಿಯೇ ಮೊಬೈಲ್ ಮತ್ತು ಟಿವಿ ಮೂಲಕ ಅಭ್ಯಾಸ ಮಾಡಬಹುದು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಸ್ಪಷ್ಟಪಡಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಲ್ಲ: ಹಾಸನ ಡಿಸಿ - Hassan District Collector
ಶಾಲೆ ಆರಂಭಕ್ಕೆ ಮುನ್ನ 3 ದಿನ ಮುಂಚಿತವಾಗಿ ಶಾಲಾ ಸಿಬ್ಬಂದಿ ಹಾಗೂ ಶಿಕ್ಷಕರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿಯನ್ನು ಆಯಾ ಮೇಲ್ವಿಚಾರಕರಿಗೆ ನೀಡಬೇಕು. ಮಕ್ಕಳು ಸಹ ಶಾಲೆಗೆ ಬರಲು ಪೋಷಕರ ಒಪ್ಪಿಗೆ ಪ್ರಮಾಣಪತ್ರವನ್ನ ಕಡ್ಡಾಯವಾಗಿ ನೀಡಬೇಕು ಎಂದು ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಸ್ಪಷ್ಟಪಡಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಡಿ.ಭಾರತಿಯೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜ. 1ರಿಂದ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಕೋವಿಡ್ ನಿಯಮದಂತೆ ತರಗತಿಗಳನ್ನ ಪ್ರಾರಂಭಿಸಲು ಜಿಲ್ಲಾ ಶಿಕ್ಷಣ ಇಲಾಖೆ ಸಜ್ಜಾಗಿದ್ದು, ಇದಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದರು.
ಜಿ.ಪಂ ಸಿಇಒ ಡಿ.ಭಾರತಿ ಮಾತನಾಡಿ, ಶಾಲೆ ಆರಂಭದ ಬಗ್ಗೆ ಸ್ಥಳೀಯ ಶಾಲೆಗಳ ಎಸ್ಡಿಎಂಸಿ ಸಭೆ ನಡೆಸಿ ಶಾಲೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಮಕ್ಕಳಿಗೆ ನಿತ್ಯವೂ ಎರಡು ಪಾಳಿಯಲ್ಲಿ ಪಾಠ ನಡೆಯಲಿದ್ದು, ಮುಂಜಾನೆ ಬಂದವರು, ಮಧ್ಯಾಹ್ನ ಬರುವ ಹಾಗಿಲ್ಲ. ಮಧ್ಯಾಹ್ನದ ನಂತರ ಬರುವವರು ಮುಂಜಾನೆ ಬರುವ ಹಾಗಿಲ್ಲ. ಮಧ್ಯಾಹ್ನದ ವೇಳೆ ಉಪಾಹರದ ಬದಲಾಗಿ ಆಹಾರ ಸಾಮಗ್ರಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.