ಹೊಳೆನರಸೀಪುರ (ಹಾಸನ): ಕೊರೊನಾ ದೃಢವಾಗಿದ್ದ ದಂಪತಿ ಆತ್ಮಹತ್ಯೆಗೆ ಶರಣವಾಗಿರುವ ಘಟನೆ ಹೊಳೆನರಸೀಪುರದಲ್ಲಿ ನಡೆದಿದೆ. ರಾಜೇಗೌಡ, ಪತ್ನಿ ರಾಜಮ್ಮ ಆತ್ಮಹತ್ಯೆ ಮಾಡಿಕೊಂಡವರು.
ಕೊರೊನಾ ದೃಢಪಟ್ಟಿರುವ ವಿಚಾರವನ್ನು ಮನಗನಿಗೂ ತಿಳಿಸದೆ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದರು. ಆದರೆ ಕೊರೊನಾದಿಂದ ಗುಣಮುಖರಾಗುವುದಿಲ್ಲ ಎಂದು ತಿಳಿದ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಲ ಮಾಡಿ ಹೆದರಿದ ದಂಪತಿ
ಮೊದಲು ಬ್ಯಾಂಕ್ನಲ್ಲಿ ಸಾಲ ಮಾಡಿದ್ದ ದಂಪತಿ, ಸಾಲ ತೀರಿಸಲಾಗದೆ ನೊಂದಿದ್ದರು. ಅಲ್ಲದೆ ಕೊರೊನಾ ದೃಢವಾಗಿರುವ ವಿಷಯ ಮಗನಿಗೆ ತಿಳಿಸಿದರೆ ಇನ್ನಷ್ಟು ಸಾಲ ಮಾಡುತ್ತಾನೆ. ಹಣಕ್ಕಾಗಿ ಜಮೀನು ಮಾರಾಟ ಮಾಡುತ್ತಾನೆ. ಇದರಿಂದ ಮುಂದೆ ಆತನ ಜೀವನ ಹಾಳಾಗುತ್ತದೆ ಎಂದು ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕೊರೊನಾ ದೃಢಪಟ್ಟ ದಂಪತಿ ನೇಣಿಗೆ ಶರಣು ರೇವಣ್ಣರಿಂದ ಪ್ರಕರಣ ಬೆಳಕಿಗೆ
ದಂಪತಿ ಆತ್ಮಹತ್ಯೆಯನ್ನ ಪುತ್ರ ಪೊಲೀಸರಿಗೆ ತಿಳಿಸದೆ ಅಂತ್ಯ ಸಂಸ್ಕಾರವನ್ನೂ ಮಾಡಿ ಮುಗಿಸಿದ್ದ. ನಿನ್ನೆಯಷ್ಟೇ ಹಾಸನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಹೆಚ್.ಡಿ.ರೇವಣ್ಣ ಈ ಪ್ರಕರಣ ಕುರಿತು ಮಾತನಾಡಿದ್ದರು.
ಪುತ್ರ ಜಗದೀಶ್ ಪ್ರಕಾರ ಪಟ್ಟಣದ ಪಿಎಲ್ಡಿ ಬ್ಯಾಂಕ್ನಲ್ಲಿ 2 ಲಕ್ಷ ರೂ. ಸಾಲ ಮಾಡಿದ್ದರು. ನಾನು ಹಾಸನದಲ್ಲಿ ಹೋಟೆಲ್ ನಡೆಸುತ್ತಿದ್ದೆ. ಲಾಭ ಕಾಣದೆ ಕಳೆದ 2 ವರ್ಷದಿಂದ ಹಿಂತಿರುಗಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೆ. ಮನೆಯಲ್ಲಿ ಆರ್ಥಿಕ ಸಂಕಷ್ಟವಿತ್ತು. ನಿರಂತರ ಲಾಕ್ಡೌನ್ ಹಾಗೂ ಬೆಳೆದ ಬೆಳೆ ನಿರೀಕ್ಷಿತ ಲಾಭ ನೀಡದ್ದರಿಂದ ಹತಾಶರಾಗಿ ಸಾವಿಗೆ ಶರಣಾಗಿದ್ದಾರೆ ಎನ್ನುತ್ತಾನೆ ಪುತ್ರ.