ಹಾಸನ:ಆಶ್ರಯ ಮನೆಗಳಿಗೆ ಮೀಸಲಿಟ್ಟ ಜಾಗವನ್ನು ಲೇಔಟ್ ಮಾಡಿಕೊಂಡು ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ ಬೇಲೂರು ತಾಲೂಕಿನಲ್ಲಿ ದಂಪತಿ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಶಾಸಕರ ಸಮ್ಮುಖದಲ್ಲಿ ಸುಖಾಂತ್ಯ ಕಂಡಿದೆ.
ಬೇಲೂರಿನ ನಾರಾಯಣಪುರದ ಮೋಹನರಾಜ್ ಮತ್ತು ಚಂದನ ಆತ್ಮಹತ್ಯೆಗೆ ಯತ್ನಿಸಿದ ದಂಪತಿ. ಈ ದಂಪತಿಗೆ ಸೇರಿದಂತೆ ಊರಿನ ಜನರಿಗೆ ಬಂಟೇನಹಳ್ಳಿ ಗ್ರಾಮ ಪಂಚಾಯಿತಿಯಿಂದ ಆಶ್ರಯ ಮನೆ ನಿರ್ಮಿಸಿಕೊಡುವುದಾಗಿ ವರ್ಷದ ಹಿಂದೆಯೇ ಅಧಿಕಾರಿಗಳು ಭರವಸೆ ನೀಡಿದ್ದರು.
ಆದರೆ ಊರಿನ ಕೆಲ ಮುಖಂಡರು ಹಣದ ಆಮೀಷಕ್ಕೆಕ್ಕೊಳಗಾಗಿ ಸರ್ವೆ ನಂಬರ್ 101ರ 1 ಎಕರೆ 30 ಗುಂಟೆ ಜಾಗವನ್ನು ಅದೇ ಊರಿನ ತಮ್ಮಯ್ಯ, ಗ್ರಾಪಂ ಮಾಜಿ ಸದಸ್ಯ ಚಂದ್ರಶೇಖರ್ ಹಾಗೂ ಹಾಲಿ ಸದಸ್ಯ ಮಂಜುನಾಥ್ಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ. ನಮಗೆ ಸಿಗಬೇಕಾದ ಜಾಗ ಅಕ್ರಮವಾಗಿ ಬೇರೆಯವರ ಕೈ ಸೇರುತ್ತಿದೆ ಎಂದು ದಂಪತಿ ಆರೋಪಿಸಿದ್ದರು.
ಇದನ್ನೂ ಓದಿ...ಆಶ್ರಯ ಮನೆ ಸಿಗದಿದ್ದಕ್ಕೆ ಬೇಸತ್ತ ದಂಪತಿ: ಟವರ್ ಏರಿ ಆತ್ಮಹತ್ಯೆಗೆ ಯತ್ನ
ಆಶ್ರಯ ಮನೆ ನೀಡುವ ಭರವಸೆ ನೀಡಿದ ಅಧಿಕಾರಿಗಳು ಮತ್ತು ಕೃತ್ಯ ನಡೆಸಿರುವ ವ್ಯಕ್ತಿಗಳು ಗ್ರಾಮಸ್ಥರಿಂದ ಸಾವಿರಾರು ರೂ. ಹಣ ಪಡೆದಿದ್ದು, ನಂತರ ಬೇರೆಯವರಿಗೆ ಖಾತೆ ಮಾಡಿಕೊಟ್ಟು ಬಡಜನತೆಗೆ ಅನ್ಯಾಯವೆಸಗಿದ್ದಾರೆ. ಈ ಬಗ್ಗೆ ಪ್ರಶ್ನಿಸಿದವರ ಮೇಲೆ ದಬ್ಬಾಳಿಕೆ ನಡೆಸಿದ ಅಧಿಕಾರಿಗಳು, ದರ್ಪ ತೋರುತ್ತಿದ್ದಾರೆ ಎಂದು ದಂಪತಿ ದೂರಿದ್ದರು.
ಆದರೆ, ಪ್ರಭಾವಿಗಳ ಕೈಗೊಂಬೆಯಾದ ಪೊಲೀಸರು ಗ್ರಾಮಸ್ಥರ ಮೇಲೆಯೇ ಪ್ರಕರಣ ದಾಖಲಿಸಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. ಪರಿಣಾಮ ದಿಕ್ಕು ತೋಚದ ದಂಪತಿ, ಮೊಬೈಲ್ ಟವರ್ ಏರಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದರು. ತಹಶೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸಮಸ್ಯೆ ಬಗೆಹರಿಸಿಕೊಡುವುದಾಗಿ ಮಾತು ಕೊಟ್ಟರೂ ಜಗ್ಗದ ದಂಪತಿ, ಶಾಸಕ ಕೆ.ಎಸ್.ಲಿಂಗೇಶ್ ಭರವಸೆ ನೀಡುತ್ತಿದ್ದಂತೆ ಕೆಳಗಿಳಿದರು.
ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಗ್ರಾಮಾಭಿವೃದ್ಧಿ ಕಾರ್ಯಗಳಿಗಾಗಿ ಸರ್ಕಾರಿ ಜಮೀನನ್ನು ಬಳಸಿಕೊಂಡು ಆಶ್ರಯ ಮನೆ, ಅಂಗನವಾಡಿ, ಶಾಲೆ ಮತ್ತು ಸ್ಮಶಾನ ನಿರ್ಮಿಸಲು ಮುಂದಾಗಿದ್ದೆವು. ಅದಕ್ಕಾಗಿ ನಾನೇ ನೇತೃತ್ವ ವಹಿಸಿ ಗ್ರಾಮಸ್ಥರಿಂದ ಹಣ ಸಂಗ್ರಹಿಸಿದ್ದೆ. ಆದರೆ ಈ ಮೂರು ಮಂದಿ ಆ ಹಣವನ್ನು ಲಪಾಟಿಯಿಸಿ ತಮ್ಮ ಲೇಔಟ್ ಮಾಡಿಸಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದರೂ ನ್ಯಾಯ ದೊರಕದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ನಿರ್ಧರಿಸಿದೆವು. ಕೂಡಲೇ ನ್ಯಾಯ ಸಿಗದಿದ್ದರೆ ಹೋರಾಟ ಮಾಡುತ್ತೇವೆ ಎಂದು ಮೋಹನ್ರಾಜ್ ಎಚ್ಚರಿಸಿದರು.