ಸಕಲೇಶಪುರ (ಹಾಸನ):ತಾಲೂಕಿನಾದ್ಯಾಂತ ಮುಂದಿನ ಆಗಸ್ಟ್ 18ರವರೆಗೆ ಕ್ಷೌರಿಕ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲು ತೀರ್ಮಾನಿಸಲಾಗಿದೆ ಎಂದು ತಾಲೂಕಿನ ಸವಿತಾ ಸಮಾಜದ ಅಧ್ಯಕ್ಷ ನಾಗರಾಜ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಿದ್ದು, ಪ್ರತಿದಿನ ಸಾವಿರ-ಸಾವಿರ ಕೊರೊನಾ ಸೋಂಕಿತ ಪ್ರಕರಣ ದಾಖಲಾಗುತ್ತಿದೆ. ಗ್ರೀನ್ ಝೋನ್ ಇದ್ದ ತಾಲೂಕು ಇದಕ್ಕೆ ಹೊರತಾಗಿಲ್ಲ. ಸಮುದಾಯಕ್ಕೂ ಕೊರನಾ ಅಂಟುವ ಭೀತಿ ಹೆಚ್ಚಾಗುತ್ತಿರುವ ಕಾರಣ ಸಾಮಾಜಿಕ ಜವಾಬ್ದಾರಿಯನ್ನರಿತು ಈ ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.