ಹಾಸನ:ನಗರದಲ್ಲಿ 27 ವರ್ಷದ ಕೆಎಸ್‌ಆರ್‌ಪಿ ಕಾನ್ಸ್ಟೇಬಲ್ ಪಿ-1993 ಕೊರೊನಾ ಸೋಂಕು ತಗುಲಿದ್ದು, ಈ ಪ್ರಕರಣ ಭಾರೀ ಭಯಾನಕವಾಗಿದೆ. ಬೆಂಗಳೂರು ಹಾಗೂ ಹಾಸನದ ವಿವಿಧೆಡೆ ಮೇ 7ರಿಂದ ಮೇ 19ರವರಗೆ ಓಡಾಡಿರೋ ಕಾನ್ಸ್ಟೇಬಲ್ ಟ್ರಾವೆಲ್ ಹಿಸ್ಟರಿ ಇದೀಗ ಲಭ್ಯವಾಗಿದೆ.
ಮೇ 7ರಂದು ಬೆಳಿಗ್ಗೆ 8 ಗಂಟೆಗೆ ಹಾಸನದಿಂದ 20 ಸಹೋದ್ಯೋಗಿಗಳ ಜೊತೆ ಬೆಂಗಳೂರಿಗೆ ಇಲಾಖೆಯ ಬಸ್‌ನಲ್ಲಿ ಪ್ರಯಾಣ ಬೆಳೆಸಿದ್ದ ಇವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾದನಾಯಕನ ಹಳ್ಳಿಯ ಅಂಚೆಪಾಳ್ಯದಲ್ಲಿ ಬಿಹಾರಿ ಕಾರ್ಮಿಕರ ಬಂದೋಬಸ್ತ್ ಡ್ಯೂಟಿ ಮಾಡಿದ್ದರು. ನಂತರ ಅದೇ ಏರಿಯಾದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ತಮ್ಮ ಬೆಟಾಲಿಯನ್ ಸಿಬ್ಬಂದಿ ಹಾಗೂ ಇತರೆ ಹೋಂ ಗಾರ್ಡ್ಗಳ ಜೊತೆ ವಾಸ್ತವ್ಯ ಹೂಡಿದ್ದರು.
ಮೇ 8-9ರಂದು ಮಾದನಾಯಕನಹಳ್ಳಿ ಡ್ಯೂಟಿ ಮಾಡಿ ಅಲ್ಲೇ ಎಲ್ಲರ ಜೊತೆಗೂ ಇದ್ದು ಬಳಿಕ ಮೇ 10ರಂದು ಅತ್ತಿಬೆಲೆ ಚೆಕ್ ಪೋಸ್ಟ್ಗೆ ನಿಯೋಜನೆಗೊಂಡು ಅಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಬಳಿಕ ಅತ್ತಿಬೆಲೆ ಸಮೀಪದ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಹೂಡಿ ಮೇ 14ರವರೆಗೂ ಇದೇ ಚೆಕ್ ಪೋಸ್ಟ್ನಲ್ಲಿ ಕರ್ತವ್ಯ ಮಾಡಿದ್ದರು ಎನ್ನಲಾಗಿದೆ.
ಮೇ 14ರ ಮಧ್ಯಾಹ್ನದಿಂದ ರಾಮನಗರ ಬಿಡದಿಯಲ್ಲಿ ಮುತ್ತಪ್ಪ ರೈ ಅಂತಿಮ ಯಾತ್ರೆಯಲ್ಲಿ ಭಾಗಿಯಾಗಿ ನಂತರ ರಾತ್ರಿ ರಾಮನಗರದ ಚಾಮುಂಡೇಶ್ವರಿ ಕಲ್ಯಾಣ ಮಂಟಪದಲ್ಲಿ ಇತರೆ ಸಿಬ್ಬಂದಿ ಜೊತೆ ವಾಸ್ತವ್ಯ ಹೂಡಿದ್ದರು. ಬಳಿಕ ಮೇ 17ರವರೆಗೆ ರಾಮನಗರ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಬಂದೋಬಸ್ತ್ನಲ್ಲಿ ಭಾಗಿಯಾಗಿ ಅದೇ ದಿನ ಸಂಜೆ ಹಾಸನಕ್ಕೆ ವಾಪಸ್ ಬಂದಿದ್ದಾರೆ.
ಹಾಸನಕ್ಕೆ ಬಂದ ಬಳಿಕ ಆಟೋದಲ್ಲಿ ಪ್ರಯಾಣ ಬೆಳೆಸಿ, ಪುಸ್ತಕ ಮಳಿಗೆಗೆ ಹೋಗಿ ಪುಸ್ತಕ ಖರೀದಿ ಹಾಗೂ ಬಟ್ಟೆ ಅಂಗಡಿಗೆ ಹೋಗಿ ಬಟ್ಟೆ ಖರೀದಿ, ಬಳಿಕ ದಿನಸಿ ಖರೀದಿ ಮಾಡಿದ್ದಾರೆ. ಮೇ 19ರಂದು 94 ಸಿಬ್ಬಂದಿ ಜೊತೆ ಪಿಟಿಯಲ್ಲಿ ಭಾಗವಹಿಸಿ ಅದೇ ದಿನ ರಾತ್ರಿ ಡ್ಯೂಟಿಯಲ್ಲಿರುವಾಗಲೇ ಜ್ಚರದಿಂದ ಬಳಲಿದ್ದಾರೆ. ಬಳಿಕ ಗಂಟಲು ದ್ರವ ಟೆಸ್ಟ್ ಮಾಡಿಸಿದಾಗ ಕೊರೊನಾ ಪಾಸಿಟಿವ್ ಇರೋದು ದೃಢವಾಗಿದೆ.
ಬರೊಬ್ಬರಿ 12 ದಿನ ನೂರಾರು ಜನರ ಜೊತೆ ನೇರ ಸಂಪರ್ಕಕ್ಕೆ ಬಂದಿರೋ ಕಾನ್ಸ್ಟೇಬಲ್ನಿಂದ ಹಾಸನದಲ್ಲೂ ಕೂಡ ಆತಂಕ ಹೆಚ್ಚಾಗಿದೆ.