ಹಾಸನ:ಕೊರೊನಾ ರೋಗ ಕೇವಲ ಮನುಕುಲವಷ್ಟೇ ಅಲ್ಲದೆ ಪ್ರಾಣಿ, ಪಕ್ಷಿ, ವೃಕ್ಷಗಳಿಗೂ ಬರುವ ಸಾಧ್ಯತೆ ಇದೆ. ಬರುವ ಹುಣ್ಣಿಮೆ ಕಳೆದ ನಂತರ ಈ ರೋಗದ ಬಗ್ಗೆ ವಿಸ್ತಾರವಾಗಿ ಹೇಳುತ್ತೇನೆ ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಅರಸೀಕೆರೆ ತಾಲೂಕಿನ ಕೋಡಿ ಮಠದಲ್ಲಿ ಕೊರೊನಾ ಕುರಿತು ಮಾಧ್ಯಮಗಳೊಂದಿಗೆ ಭವಿಷ್ಯ ನುಡಿದ ಅವರು, ಜಗತ್ತಿನಾದ್ಯಂತ ಪ್ರಸಾರವಾಗಿರುವ ಈ ಮಾರಕ ರೋಗ ಮನುಕುಲಕ್ಕೆ ಕಂಟಕಪ್ರಾಯವಾಗಿದೆ. ಇದು ದಿನ ದಿನಕ್ಕೂ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ ಎಂದರು.
ಕೊರೊನಾ ಕುರಿತು ಮಾತನಾಡಿದ ಕೋಡಿ ಮಠದ ಶ್ರೀಗಳು ಈ ರೋಗವನ್ನು ಮನುಷ್ಯ ತನ್ನ ಸ್ವಾರ್ಥದಿಂದ ತಾನೇ ತಂದುಕೊಳ್ಳುತ್ತಾ ಇದ್ದಾನೆ. ವಿಶಾಲ ಬುದ್ಧಿಯ ಮನುಷ್ಯರಿಂದಲೇ ಈ ಕಾಯಿಲೆ ಹುಷಾರಾಗುವ ಲಕ್ಷಣ ಇದೆ. ಆದರೆ ಸ್ವಚ್ಛತೆ ಬಹಳ ಮುಖ್ಯ. ಅದಿದ್ದರೆ ಏನೂ ಪ್ರಮಾದವಿಲ್ಲ. ಅನೇಕ ಮದ್ದು, ಅನೇಕ ವೈದ್ಯರಿದ್ದಾರೆ. ಇದು ಯಾವ ಮಟ್ಟಕ್ಕೆ ಹೋದರೂ ಹೆದರುವ ಅವಶ್ಯಕತೆ ಇಲ್ಲ ಎಂದರು.
ಇತ್ತೀಚೆಗೆ ಕೋಡಿ ಮಠದ ಶಾಸ್ತ್ರಿಯೊಬ್ಬರಿಗೆ ರೋಗ ಹರಡಿದೆ ಎಂಬ ಸುದ್ದಿಯನ್ನು ನಾವು ಕೇಳಿದ್ದೇವೆ. ಆತ ನಮ್ಮ ಮಠದ ಶಿಷ್ಯನೇ ಆದರೂ ಇಲ್ಲೇ ಪಕ್ಕದ ಜಾವಗಲ್ ಗ್ರಾಮದವನು. ಆತ ಮಠದಲ್ಲಿ ಇಲ್ಲ. ಬೆಂಗಳೂರಿನಲ್ಲಿ ಇದ್ದಾನೆ. ಬೆಂಗಳೂರಿನಲ್ಲಿ ಹೋಮ, ಪೂಜೆ ಮಾಡುತ್ತಿದ್ದಾನೆ ಎಂದು ಸ್ಪಷ್ಟನೆ ನೀಡಿದರು. ಮುಂದೆ ಯುದ್ಧದಂತಹ ಪ್ರಮಾದಗಳೇನೂ ಜರುಗಲ್ಲ. ಯಾರೂ ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದರು.