ಹಾಸನ:ಹಾಸನಕ್ಕೆ ಐಐಟಿ ತರುವುದು ಮಾಜಿ ಪ್ರಧಾನಿ ದೇವೇಗೌಡರ ಹಲವಾರು ವರ್ಷದ ಕನಸು. ಹಾಗಾಗಿ 20ವರ್ಷಗಳ ಹಿಂದೆಯ ಐಐಟಿಗೆ ಜಾಗವನ್ನು ಮೀಸಲಿಡಲಾಗಿದ್ದು, ಅದನ್ನು ಈಗ ಖಾಸಗಿಯವರಿಗೆ ಪರಭಾರೆ ಮಾಡಲು ಸರ್ಕಾರ ಮುಂದಾಗುತ್ತಿದೆ. ಹೀಗೆನಾದರೂ ಆದರೇ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೆಚ್.ಡಿ.ರೇವಣ್ಣ ಹೇಳಿದರು. ಸಂಸದರ ನಿವಾಸದಲ್ಲಿ ಮಾತನಾಡಿದ ಅವರು, ಈ ಜಾಗವನ್ನು ಏನಾದರೂ ಬೇರೆ ಉದ್ದೇಶಕ್ಕೆ ಜಾಗವನ್ನು ಕೊಟ್ಟರೇ ಹೆಚ್.ಡಿ. ದೇವೇಗೌಡರ ನೇತೃತ್ವದಲ್ಲಿ ವಿಧಾನಸೌಧದ ಬಳಿ ಗಾಂಧಿ ಪ್ರತಿಮೆ ಮುಂದೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಕೇಂದ್ರ ಮಾನವ ಸಂಪನ್ಮೂಲ ಸಚಿವರನ್ನೂ ಹೆಚ್.ಡಿ. ದೇವೇಗೌಡರು ಈ ಹಿಂದೆಯೇ ಭೇಟಿ ಮಾಡಿದರು. ಅಂದು ಜವರೇಗೌಡರು ಐಐಟಿ ಮಾಡು ಎಂದು ನನಗೆ ಹೇಳಿದರು. ಇದರಿಂದ ದೇವೇಗೌಡರನ್ನು ನಾನೇ ಕರೆದುಕೊಂಡು ಅರ್ಜುನ್ ಸಿಂಗ್ರ ಬಳಿ ಹೋಗಿದ್ದೆವು. ಅವತ್ತು ಹೆಚ್.ಡಿ. ಕುಮಾರಸ್ವಾಮಿ ಬಿಜೆಪಿ ಜೊತೆ ಹೋದರು ಎನ್ನುವ ಒಂದೇ ಕಾರಣಕ್ಕೆ ಐಐಟಿಯನ್ನು ರಾಜಸ್ಥಾನಕ್ಕೆ ನೀಡಲಾಯಿತು. ಈ ರಾಜ್ಯದಲ್ಲಿ ಯಾರೂ ಕೂಡ ಐಐಟಿ ಕೇಳಿರಲಿಲ್ಲ. ಈಗಾಗಲೇ ಐಐಟಿಗಾಗಿ ಹಾಸನದಲ್ಲಿ 1ಸಾವಿರ ಎಕರೆ ಜಾಗ ಮೀಸಲಿಡಲಾಗಿದೆ ಎಂದರು.
ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಬಂದಾಗ ಮನಮೋಹನ್ ಸಿಂಗ್ ರ ಬಳಿ ಪ್ರಯತ್ನ ಪಟ್ಟಿದ್ದೆವು. ಸ್ಮೃತಿ ಇರಾನಿ ಕರ್ನಾಟಕಕ್ಕೆ ಐಐಟಿ ಕೊಡಲು ಒಪ್ಪಿಗೆ ನೀಡಿದ್ದರು. ಅಂದಿನ ರಾಜ್ಯ ಕಾಂಗ್ರೆಸ್ ಪಕ್ಷದವರು ಹಾಸನ ಬಿಟ್ಟು ಬೇರೆ ಹೆಸರು ಸೂಚಿಸಿದರು. ಕೆಲ ದಿನಗಳ ಹಿಂದೆ ದೇವೇಗೌಡರು ರಾಜ್ಯಸಭೆ ಭಾಷಣದಲ್ಲಿ ಐಐಟಿ ಬಗ್ಗೆ ಚರ್ಚೆ ಮಾಡಿದ್ದು, ಈ ಬಗ್ಗೆ ಮೋದಿ ಅವರು ಪರಿಶೀಲನೆ ನಡೆಸಿದ್ದಾರೆ. ದೇವೇಗೌಡರ ಬಳಿ ಐಐಟಿ ವಿಚಾರವಾಗಿ ಪ್ರಸ್ಥಾಪ ಮಾಡಿದ್ದಾರೆ. ಐಐಟಿಗಾಗಿ ಮೀಸಲಿರುವ ಜಾಗವನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಬೇರೆ ಉದ್ದೇಶಕ್ಕೆ ಬಳಸಲು ಪ್ಲಾನ್ ಮಾಡಿದ್ದಾರೆ.
ಐಐಟಿ ಜಾಗ ವರ್ಗಾವಣೆ ಮಾಡಿದರೆ ಉಗ್ರ ಹೋರಾಟ:ಈ ವಿಚಾರವಾಗಿ ದೇವೇಗೌಡರು ಈ ಬಗ್ಗೆ ಮುಖ್ಯಮಂತ್ರಿ, ಸಚಿವರಿಗೆ ಪತ್ರ ಬರೆದಿದ್ದಾರೆ ಎಂದರು. ಐಐಟಿ ಜಾಗವನ್ನು ಬೇರೆ ಉದ್ದೇಶಕ್ಕೆ ಬಳಸುವುದಿಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ. ಇದರಲ್ಲಿ ನನ್ನ ವೈಯಕ್ತಿಕ ಉದ್ದೇಶ ಏನಿಲ್ಲ. ಜಿಲ್ಲೆಯ, ರಾಜ್ಯದ ಯುವಕರಿಗೆ ಅನುಕೂಲ ಆಗುತ್ತದೆ ಎಂಬ ಉದ್ದೇಶ ನನ್ನದು. ಇದನ್ನು ಮೀರಿ ಬೇರೆ ಉದ್ದೇಶಕ್ಕೆ ಜಾಗ ಏನಾದರು ಬಳಸಿದರೆ ನಾವು ಹೆಚ್.ಡಿ. ದೇವೇಗೌಡರ ನೇತೃತ್ವದಲ್ಲಿ ವಿಧಾನಸೌಧದ ಬಳಿ ಗಾಂಧಿ ಪ್ರತಿಮೆ ಮುಂದೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.