ಸಕಲೇಶಪುರ: ಮುಂಬರುವ ಗ್ರಾಪಂ ಸೇರಿದಂತೆ ಪ್ರತಿಯೊಂದು ಚುನಾವಣೆಗೂ ಪಕ್ಷದ ಕಾರ್ಯಕರ್ತರು ಸಜ್ಜಾಗಬೇಕೆಂದು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಹೇಳಿದರು.
ಗ್ರಾಪಂ ಸೇರಿದಂತೆ ಎಲ್ಲಾ ಚುನಾವಣೆಗೂ ಸಜ್ಜಾಗುವಂತೆ ಕೈ ಕಾರ್ಯಕರ್ತರಿಗೆ ಸೂಚನೆ - ಸಕಲೇಶಪುರ ಸುದ್ದಿ
ಸಕಲೇಶಪುರದಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ಸಭೆ ನಡೆಯಿತು. ಗ್ರಾಪಂ ಸೇರಿದಂತೆ ಪ್ರತಿಯೊಂದು ಚುನಾವಣೆಗೂ ಪಕ್ಷದ ಕಾರ್ಯಕರ್ತರು ಸಜ್ಜಾಗುವ ಕುರಿತು ಸಭೆಯಲ್ಲಿ ತಿಳಿಸಲಾಯಿತು.

ಪಟ್ಟಣದ ನಂಜಮ್ಮ ಮಹಿಳಾ ಸಮಾಜದಲ್ಲಿ ನಡೆದ ಕಾಂಗ್ರೆಸ್ ಮಹಿಳಾ ಘಟಕದ ಸಭೆಯನ್ನು ಉದ್ದೇಶಿಸಿ ಮಾತನಾಡಿ, ನಾನು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಆಯ್ಕೆಯಾದ ನಂತರ ಪ್ರತಿಯೊಂದು ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಿಗೆ ಭೇಟಿ ಮಾಡಿ ಅಲ್ಲಿನ ಸಮಸ್ಯೆಗಳನ್ನು ಅರಿಯುತ್ತಿದ್ದೇನೆ. ಮಹಿಳಾ ಘಟಕವನ್ನು ಬಲಿಷ್ಠಗೊಳಿಸುವುದು ನನ್ನ ಉದ್ದೇಶವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ನೆಡೆಸುತ್ತಿರುವ ಬಿಜೆಪಿ ಕೇವಲ ಸುಳ್ಳುಗಳನ್ನೆ ಮಾರ್ಕೆಟಿಂಗ್ ಮಾಡುತ್ತಿದೆ ಎಂದರು.
ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ತಾರಾ ಚಂದನ್ ಮಾತನಾಡಿ ಜಿಲ್ಲೆಯಲ್ಲಿ ತಾಲೂಕಿನಿಂದ ತಾಲೂಕಿಗೆ ಭಿನ್ನ ವಾತಾವರಣವಿದೆ. ಆದರೂ ಸಹ ಪಕ್ಷದ ಸಂಘಟನೆಗೆ ಶ್ರಮ ಹಾಕುತ್ತಿದ್ದೇನೆ. ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ಜನ ಬೆಂಬಲವಿದ್ದು ಕನಿಷ್ಠ 5 ಕ್ಷೇತ್ರಗಳಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಪ್ರಯತ್ನ ಮಾಡೋಣ. ಮಹಿಳಾ ಘಟಕಗಳನ್ನು ಜಿಲ್ಲೆಯ ಪ್ರತೀ ಕ್ಷೇತ್ರದಲ್ಲೂ ಬಲಿಷ್ಠಗೊಳಿಸಲಾಗುವುದು ಎಂದರು.