ಕರ್ನಾಟಕ

karnataka

ETV Bharat / state

ನಾವಿದ್ರೆ ಸ್ವಾಮಿ ನೀವು.. ನಾವೇ ಇಲ್ಲ ಅಂದ್ರೆ..? ಡೀಲ್ ಆಗ್ಬೇಡಿ, ಪಕ್ಷ ಉಳಿಸಿ: ಕೈ ಕಾರ್ಯಕರ್ತರ ಅಸಮಾಧಾನ

ಅಲ್ಪಸಂಖ್ಯಾತರ ಪರ ಮಾತನಾಡುವ ಸಿದ್ದರಾಮಯ್ಯ ಅವರನ್ನು ಬಿಜೆಪಿಯವರು ಸಿದ್ರಾಮುಲ್ಲಾಖಾನ್ ಅಂತಾರೆ. ಅಂತಹ ಬಿಜೆಪಿಯಲ್ಲಿದ್ದವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿದ್ದೀರಿ, ಇದರಲ್ಲೂ ಡೀಲ್ ಮಾಡಿಕೊಂಡ್ರಾ, ಬರೀ ಡೀಲ್ ನಿಮ್ದು ಎಂದು ಮನಸ್ಸಿನಲ್ಲಿದ್ದ ಸಿಟ್ಟನ್ನು ಕಾಂಗ್ರೆಸ್​ ಮುಖಂಡರು ಹೊರಹಾಕಿದರು.

Hassan
ಹಾಸನ

By

Published : Dec 10, 2022, 4:10 PM IST

Updated : Dec 10, 2022, 4:50 PM IST

ಕಾಂಗ್ರೆಸ್​ ಕಾರ್ಯಕರ್ತರ ಅಸಮಾಧಾನ.. ಗೊಂದಲದ ವಾತಾವರಣ

ಹಾಸನ: 25 ವರ್ಷದಲ್ಲಿ ಒಬ್ಬ ಉತ್ತಮ ಅಧ್ಯಕ್ಷರನ್ನು ನೇಮಕ ಮಾಡಲು ಆಗಲಿಲ್ಲ. ನಾಚಿಕೆ ಆಗಬೇಕು ನಿಮಗೆ, ನಿಮ್ಮ ಹತ್ರ ಹಣವಿರಬಹುದು, ನಾವಿಲ್ಲದಿದ್ದರೆ ನೀವು ಏನೂ ಮಾಡಲು ಆಗಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಎದುರಿನಲ್ಲಿಯೇ ಕಾಂಗ್ರೆಸ್ ಕಾರ್ಯಕರ್ತರು ಬಹಿರಂಗ ಸಭೆಯಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ವಲಸೆ ಬಂದು ಒಂದೆರಡು ತಿಂಗಳಿನಲ್ಲಿಯೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಮಾಡಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ರಾಜ್ಯ ನಾಯಕರ ವಿರುದ್ಧ ಕೆಂಡಾಮಂಡಲವಾದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಆರಂಭ ಆಗುತ್ತಿದ್ದಂತೆಯೇ ಮಾತನಾಡಿದ ಹಲವು ಮುಖಂಡರು, ಜಿಲ್ಲಾ ನಾಯಕರು ಹಾಗೂ ಮುಖಂಡರ ಅಭಿಪ್ರಾಯ ಪಡೆಯದೆ ಇ.ಹೆಚ್. ಲಕ್ಷ್ಮಣ್ ಅವರನ್ನು ಆಯ್ಕೆ ಮಾಡಲಾಗಿದೆ. ಅಲ್ಪಸಂಖ್ಯಾತರ ಪರ ಮಾತನಾಡುವ ಸಿದ್ದರಾಮಯ್ಯ ಅವರನ್ನು ಬಿಜೆಪಿಯವರು ಸಿದ್ರಾಮುಲ್ಲಾಖಾನ್ ಅಂತಾರೆ. ಅಂತಹ ಬಿಜೆಪಿಯಲ್ಲಿದ್ದವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿದ್ದೀರಿ, ಇದರಲ್ಲೂ ಡೀಲ್ ಮಾಡಿಕೊಂಡ್ರಾ, ಬರೀ ಡೀಲ್ ನಿಮ್ದು ಎಂದು ಮನಸ್ಸಿನಲ್ಲಿದ್ದ ಸಿಟ್ಟನ್ನು ಹೊರಹಾಕಿದರು.

ರಾಜ್ಯ ನಾಯಕರು ಪಕ್ಷದ ಹಿತದೃಷ್ಟಿ ಹಾಗೂ ಸಂಘಟನೆ ದೃಷ್ಟಿಯಿಂದ ನಿರ್ಧಾರ ತೆಗೆದುಕೊಂಡಿರುತ್ತಾರೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಧ್ರುವನಾರಾಯಣ್ ಮನವಿ ಮಾಡುತ್ತಿದ್ದಂತೆ, ಮತ್ತೆ ಅಸಮಾಧಾನ, ಗದ್ದಲ, ಗೊಂದಲ ಮುಂದುವರಿಯಿತು. ಒಬ್ಬರ ಪರ ಇನ್ನೊಬ್ಬರು ಮಾತನಾಡಿದ್ದರಿಂದ ಸಭೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ, ಮುಖಂಡರು ಮತ್ತು ಕಾರ್ಯಕರ್ತರ ನಡುವಿನ ವಾಗ್ವಾದ ನಡೆದು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಯಿತು. ಕಾರ್ಯಕರ್ತರ ಗದ್ದಲ ನಿಯಂತ್ರಿಸಲಾಗದೆ ರಾಜ್ಯ ನಾಯಕರು ಮೂಕ ಪ್ರೇಕ್ಷಕರಾದರು. ಜೊತೆಗೆ ಧ್ರುವನಾರಾಯಣ್ ಸಮ್ಮುಖದಲ್ಲೇ ಕಾರ್ಯಕರ್ತರು ಕಿತ್ತಾಡಿಕೊಂಡರು.

ಈ ನಡುವೆ ಬೇಲೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಬಿ.ಶಿವರಾಂ ಪರವಾಗಿ ಮಾತನಾಡಲು ಮುಂದಾದವರ ವಿರುದ್ಧ ಅನೇಕರು ಕಿಡಿಕಾರಿದರು. ಶಿವರಾಂ ಪರವಾಗಿ ಮಾತನಾಡುತ್ತಿದ್ದವರ ಮೇಲೆ ಕೆಲವರು ಮುಗಿಬಿದ್ದರು. ಆಗ ಮಾತಿನ ವಾಕ್ಸಮರ ಮುಂದುವರೆದಿದ್ದು, ವಾಗ್ವಾದ ನಡೆಸುತ್ತಿದ್ದವರನ್ನು ಸಭೆಯಿಂದ ಹೊರಕಳಿಸಿ ಉಳಿದ ಮುಖಂಡರು ಪರಿಸ್ಥಿತಿ ತಿಳಿಗೊಳಿಸಿದರು. ಆದರೂ ಸುಮ್ಮನಾಗದ ಕೆಲವರು, ಕಾಂಗ್ರೆಸ್ ನಾಯಕರನ್ನು ಹಿಗ್ಗಾಮುಗ್ಗಾ ಜಾಡಿಸಿದರು. ನೀವು ಕೆಟ್ಟು... ಹಿಡಿದು ಹೋಗಿದ್ದೀರಿ. ಗೆದ್ದು ಆಗೋಯ್ತು, ಆಗಲೇ ಸರ್ಕಾರ ರಚನೆ ಮಾಡಲು ರೆಡಿ ಆಗಿದ್ದೀವಿ ಅನ್ಕೊಂಡಿದ್ದೀರಾ, ಇದೇ ರೀತಿ ಆದರೆ ಎಲ್ಲೂ ಗೆಲ್ಲಲು ಆಗಲ್ಲ ಎನ್ನುತ್ತ ಅಸಮಾಧಾನದಿಂದ ಹೊರನಡೆದರು.

ಇದನ್ನೂ ಓದಿ:ಕಾಂಗ್ರೆಸ್​ಗೂ ಘಜ್ನಿ ಸಂತತಿಗೂ ಬಹಳ ಸಾಮ್ಯತೆ ಇದೆ: ರಾಜ್ಯ ಬಿಜೆಪಿ

Last Updated : Dec 10, 2022, 4:50 PM IST

ABOUT THE AUTHOR

...view details