ಹಾಸನ:''ಐದು ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದಲ್ಲಿ ಸರ್ಕಾರ ರಚಿಸಿರುವ ಕಾಂಗ್ರೆಸ್ ಬಂಡವಾಳವು ಮೇ ತಿಂಗಳಲ್ಲಿ ನಡೆಯುವ ಲೋಕಾಸಭಾ ಚುನಾವಣೆಯಲ್ಲಿ ಬಯಲಾಗಲಿದೆ'' ಎಂದು ಮಾಜಿ ಸಚಿವ ಎಸ್ ಎ ರಾಮದಾಸ್ ಹೇಳಿದ್ದಾರೆ.
ಬಿಜೆಪಿ ಕಚೇರಿಗೆ ಭೇಟಿ ನೀಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ರಾಷ್ಟ್ರ ನಾಯಕರು ಅಂತ ಬಂದಾಗ ಅವರ ಘನತೆ, ಗೌರವದಲ್ಲಿ ನಾನೇನು ಮಾತನಾಡುತ್ತಿದ್ದೀನಿ ಎಂಬುದರ ಅರಿವು ಇಟ್ಟುಕೊಂಡು ಮಾತನಾಡುವುದು ಒಳ್ಳೆಯದು. ಇದೇನು ಅವರಿಗೆ ಹೊಸತಲ್ಲ. ಈ ರೀತಿ ಮಾತನಾಡಿ ಕೊನೆಗೆ ಕೇಸು ನ್ಯಾಯಾಲಯದಲ್ಲೂ ಬರುವಂತಾಯಿತು. ಮೋದಿ ಬಗ್ಗೆ ಮಾತನಾಡಲು ಅವರ ಬಳಿ ಏನು ಉಳಿದಿಲ್ಲ. ಕಾಂಗ್ರೆಸ್ಸರ್ಕಾರದಲ್ಲಿ ಮಾಡಿದಂತ ಸ್ಕ್ಯಾಮ್ಗಳನ್ನು ನಮ್ಮ ಕೇಂದ್ರ ಸರ್ಕಾರ ಮಾಡಿಲ್ಲ. ಇದರಿಂದ ಪ್ರಸ್ತುತ ಇಡೀ ದೇಶ ನೆಮ್ಮದಿಯಿಂದ ಇದೆ'' ಎಂದರು.
''ಬಿಜೆಪಿ ಬಗ್ಗೆ ಕ್ಷುಲ್ಲಕ ಮಾತುಗಳನ್ನು ಆಡಿರುವುದು ಸಂಸದ ರಾಹುಲ್ ಗಾಂಧಿಯವರ ಘನತೆ ಗೌರವಕ್ಕೆ ಸರಿಹೊಂದುವುದಿಲ್ಲ. ಗೆದ್ದಾಗ ಎಲ್ಲರೂ ನಮ್ಮದೇ ಎನ್ನುತ್ತಾರೆ. ಆದರೆ, ನಮ್ಮ ದೇಶದ ಪ್ರಧಾನಿ ಮೋದಿ ಸೋತಂತ ಆಟಗಾರರ ಬಳಿ ಹೋಗಿ, ಗೆಲುವಿನ ದಿನಗಳು ಬರುತ್ತವೆ ಎಂದು ಸಾಂತ್ವನ ಹೇಳಿದ್ದರು. ದೇಶದ ಇತಿಹಾಸದಲ್ಲಿ ಯಾವುದೇ ಪ್ರಧಾನಮಂತ್ರಿ ಈ ಕಾರ್ಯವನ್ನು ಮಾಡಿಲ್ಲ. ಆದ್ರೆ, ರಾಹುಲ್ ಗಾಂಧಿ ಅವರು ಈ ಬಗ್ಗೆ ಶ್ಲಾಘಿಸಬೇಕೇ ಹೊರತು, ಕ್ಷುಲ್ಲಕ ಮಾತುಗಳನ್ನಾಡಬಾರದು. ಅವರನ್ನು ರಾಷ್ಟ್ರೀಯ ನಾಯಕರು ಎಂದು ಹೇಳಿಕೊಳ್ಳುವುದಕ್ಕೆ ಅವರ ಪಾರ್ಟಿಯವರಿಗೇ ಬೇಸರವಾಗುತ್ತಿದೆ'' ಎಂದು ಕಿಡಿಕಾರಿದರು.