ಹಾಸನ :ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಹಾಸನದ ಶಾಸಕ ಪ್ರೀತಂಗೌಡ ನೂರಾರು ಕೋಟಿ ಆಸ್ತಿಯ ಒಡೆಯರಾಗಿದ್ದಾರೆ. ಈ ಹಣ ಎಲ್ಲಿಂದ ಬಂತು ಎಂಬ ಮಾಹಿತಿಯನ್ನು ಬಹಿರಂಗಪಡಿಸಬೇಕೆಂದು ಕಾಂಗ್ರೆಸ್ ಮುಖಂಡ ಹೆಚ್ ಕೆ ಮಹೇಶ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೂರಾರು ಕೋಟಿ ಆಸ್ತಿ ಖರೀದಿಗೆ ಶಾಸಕ ಪ್ರೀತಂ ಜೆ ಗೌಡಗೆ ಹಣ ಎಲ್ಲಿಂದ ಬಂತು? ಇದು ಸರ್ಕಾರಿ ಅಧಿಕಾರಿಗಳ ವರ್ಗಾವಣೆ ದಂಧೆಯ ಹಣವೋ? ಅಥವಾ ಟ್ರಾಫಿಕ್ ಪೊಲೀಸ್ರಿಂದ ಕಲೆಕ್ಷನ್ ಮಾಡಿಸುವ ಹಣವೋ? ಕರ್ನಾಟಕ ಕೈಗಾರಿಕಾ ಪ್ರದೇಶದ ಉದ್ಯಮಗಳಲ್ಲಿ ವಸೂಲಿ ಮಾಡಿದ ಹಣವೋ?, ಆರ್ಟಿಒ ಕಚೇರಿಯಿಂದ ಹೆದರಿಸಿ ವಸೂಲಿ ಮಾಡಿದ ಹಣವೋ? ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಿಂದ ವಸೂಲಿ ಮಾಡಿದ ಹಣವೋ? ಅಭಿವೃದ್ಧಿಗಾಗಿ ತಂದಿದ್ದು ಎಂದು ಗುತ್ತಿಗೆದಾರರಿಂದ 15% ವಸೂಲಿ ಮಾಡಿದ ಹಣವೋ? ಎಂದು ಸಾರ್ವಜನಿಕರಿಗೆ ತಿಳಿಸಬೇಕು. ಇಲ್ಲ ಮುಂದಿನ ದಿನದಲ್ಲಿ ತನಿಖೆ ಮಾಡಿಸುವ ಹಂತಕ್ಕೆ ಹೋಗಬೇಕಾಗುತ್ತದೆ ಎಂದು ಗುಡುಗಿದರು.
ಶಾಸಕ ಪ್ರೀತಂ ಗೌಡ ತಮ್ಮ ಅಧಿಕಾರವನ್ನು ಉಪಯೋಗಿಸಿಕೊಂಡು ರಾಜರತ್ನಂ ಮಾಚ್ ಇಂಡಸ್ಟ್ರೀಸ್‌ನ ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿದ್ದಾರೆ. ಇದರ ಮೌಲ್ಯ ಸುಮಾರು 15.5 ಕೋಟಿ ಇದೆ. ಆದರೆ, ಶಾಸಕರು ಅಧಿಕಾರಿಗಳಿಗೆ ಒತ್ತಡ ತಂದು ಹೆದರಿಸಿ ಬೆದರಿಸಿ ಸರ್ಕಾರ ನಿಗದಿ ಮಾಡಿದ ಬೆಲೆಗಿಂತ ಕಮ್ಮಿ ಬೆಲೆಗೆ ಅಂದರೆ ₹7.5 ಕೋಟಿಗೆ ನೋಂದಾಯಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿದರು.
ನೀವೇ ನೋಂದಾಯಿಸಿಕೊಂಡಿರುವ ಆಸ್ತಿ ₹30 ಕೋಟಿ ಬೆಲೆ ಬಾಳುತ್ತಿದೆ. ನಿಮಗೆ ಕಿಂಚಿತ್ತಾದ್ರೂ ಮಾನ-ಮರ್ಯಾದೆ ಇದ್ರೆ, ನಿಮಗೆ ಎಲ್ಲಿಂದ ಹಣ ಬಂತು ಎಂದು ಸಾರ್ವಜನಿಕರಿಗೆ ತಿಳಿಸಬೇಕು. ನಾನು ಸಾಕಷ್ಟು ಜನರನ್ನು ನೋಡಿದ್ದೇನೆ. ಈ ಮಟ್ಟಕ್ಕೆ ಆಸ್ತಿ ಖರೀದಿ ಮಾಡಿದ್ದನ್ನು ನೋಡಿಲ್ಲ. ಹಾಸನದಲ್ಲೇ ಇಷ್ಟು ಆಸ್ತಿ ಮಾಡಿರುವವರು ಹೊರಗೆ ಇನ್ನೆಷ್ಟು ಆಸ್ತಿ ಗಳಿಸಿರಬಹುದು ಎಂದು ಪ್ರಶ್ನಿಸಿ ಆಸ್ತಿ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.