ಕರ್ನಾಟಕ

karnataka

ETV Bharat / state

ದೇವರ ಹೆಸರಿನಲ್ಲಿ ಶ್ರೀಮಂತರು ಮತ್ತು ಬಡವರು ಎಂದು ತಾರತಮ್ಯ ಮಾಡುತ್ತಿರುವುದು ಸರಿಯಲ್ಲ: ದೇವರಾಜೇಗೌಡ - Hasanamba Temple

ನಾಳೆ ಹಾಸನದ ಅದಿ ದೇವತೆ ಹಾಸನಾಂಬ ದೇವಸ್ಥಾನದ ಬಾಗಿಲು ತೆರೆಯಲಿದ್ದು, ದೇವಾಲಯಕ್ಕೆ ಆಹ್ವಾನಿತರಿಗೆ ಅವಕಾಶ ನೀಡಿ, ಸಾರ್ವಜನಿಕರ ಪ್ರವೇಶ ನಿಷೇಧ ಮಾಡಿರುವುದನ್ನು ಕಾಂಗ್ರೆಸ್ ಮುಖಂಡ ದೇವರಾಜೇಗೌಡ ಖಂಡಿಸಿದ್ದಾರೆ.

press meet
ಸುದ್ದಿಗೋಷ್ಠಿ

By

Published : Nov 4, 2020, 5:22 PM IST

ಹಾಸನ: ಹಾಸನಾಂಬೆ ದೇವಾಲಯಕ್ಕೆ ಆಹ್ವಾನಿತರಿಗೆ ಅವಕಾಶ ನೀಡಿ, ಸಾರ್ವಜನಿಕರ ಪ್ರವೇಶ ನಿಷೇಧ ಮಾಡಿರುವುದು ಎಷ್ಟು ಸರಿ ಎಂದು ಕಾಂಗ್ರೆಸ್ ಮುಖಂಡ ದೇವರಾಜೇಗೌಡ ಪ್ರಶ್ನೆ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂದು ಕೊರೊನಾ ವೈರಸ್ ಹರಡಿ ಎಲ್ಲಡೆ ಜನತೆ ನರಳುತ್ತಿದ್ದಾರೆ. ದುಡಿಮೆ ಇಲ್ಲ, ಸಂಸಾರ ಸಾಗಿಸಲು ಆದಾಯ ಇಲ್ಲ, ಇಂತಹ ಸಂಕಷ್ಟದ ಸಂದರ್ಭದಲ್ಲಿ ಈ ರೋಗ ತಡೆಗಟ್ಟೋ ವಿಚಾರವಾಗಿ ಬಿಜೆಪಿ ಸರ್ಕಾರ ಒಂದು ದೃಢನಿರ್ಧಾರ ತೆಗೆದುಕೊಳ್ಳಲು ವಿಫಲವಾಗಿದೆ. ಈ ಸಾಂಕ್ರಾಮಿಕ ರೋಗದ ಮಧ್ಯೆ ಹಾಸನ ಜಿಲ್ಲೆಯಲ್ಲಿ ರಾಜಕೀಯ ದೊಂಬರಾಟ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ದೇವರಾಜೇಗೌಡ ಸುದ್ದಿಗೋಷ್ಠಿ

ಪ್ರತಿ ವರ್ಷದಂತೆ ಈ ವರ್ಷವು ನಾಳೆ (ಗುರುವಾರ) ದಂದು ಹಾಸನದ ಅದಿ ದೇವತೆ ಹಾಸನಾಂಬ ದೇವಸ್ಥಾನದ ಬಾಗಿಲು ತೆರೆಯಲಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಾರ್ವಜನಿಕರಿಗೆ ಪ್ರವೇಶವಿಲ್ಲ ಎಂಬುವುದನ್ನು ಖಚಿತಪಡಿಸಿದ್ದಾರೆ. ಆದರೆ ದೇವರ ಹೆಸರಿನಲ್ಲಿ ಶ್ರೀಮಂತರು ಮತ್ತು ಬಡವರು ಎಂದು ತಾರತಮ್ಯ ಮಾಡುತ್ತಿರುವುದು ಸರಿಯಲ್ಲ. ಕೊರೊನಾ ನೆಪದಲ್ಲಿ ನೂರಾರು ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನದ ಪರಂಪರೆಗೆ ಧಕ್ಕೆ ತರುವುದು ಬೇಡ ಎಂದು ಹೇಳಿದರು.

ಯಾವ ಮಂತ್ರಿ, ಶಾಸಕರ ಮುಲಾಜಿಗೆ ಒಳಗಾಗಿ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ ಗೊತ್ತಿಲ್ಲ. ಮಾಸ್ಕ್, ಸ್ಯಾನಿಟೈಸರ್ ಹಾಗೂ ಪರಸ್ಪರ ಅಂತರ ಪಾಲನೆಯ ನಿಯಮ ಕಡ್ಡಾಯಗೊಳಿಸಿ ಎಲ್ಲ ಭಕ್ತರಿಗೂ ಪ್ರವೇಶ ನೀಡಬಹುದಿತ್ತು. ಆದರೆ ಹಾಸನಾಂಬೆ ಜಾತ್ರೆಯನ್ನು ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಸೀಮಿತ ಎಂಬಂತಾಗಿದೆ. ಜಿಲ್ಲಾಧಿಕಾರಿ ಆರ್. ಗಿರೀಶ್ ರಾಜಕೀಯ ಪಕ್ಷದ ಒತ್ತಡಕ್ಕೆ ಸಿಲುಕಿದ್ದಾರೆ ಎಂದರು.

ಈಗಾಗಲೇ ಮೈಸೂರು ದಸರಾ ಸಂದರ್ಭದಲ್ಲಿ ಈ ರೋಗವು ಅನಿಯಂತ್ರಿತವಾಗಿ ಹರಡಿರುವುದು ತಾಜಾ ಉದಾಹರಣೆ ಕಣ್ಣು ಮುಂದೆ ಇದೆ. ಇದನ್ನು ನೋಡಿಯಾದರೂ ಜಿಲ್ಲಾಡಳಿತ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದು ಒಳಿತು. ಹೂವಿನ ಅಲಂಕಾರ, ಲೈಟಿಂಗ್, ಶಾಮಿಯಾನ ಗುತ್ತಿಗೆಯನ್ನು ನಾಗರಾಜ್ ಎಂಬುವರಿಗೆ ಮಾತ್ರ ನೀಡಿದ್ದಾರೆ. ಕಡಿಮೆ ಮೊತ್ತಕ್ಕೆ ಬಿಡ್ ಕೂಗಿದ ಹೊರ ಗುತ್ತಿಗೆದಾರರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.

ಈ ಬಾರಿಯು ಕೂಡ ಕರೆಯಲಾಗಿದ್ದ ಟೆಂಡರ್ ಪ್ರಕ್ರಿಯೆಯನ್ನು ಬುಡಮೇಲು ಮಾಡಿ ಅತಿ ಕಡಿಮೆ ಮೊತ್ತಕ್ಕೆ ಟೆಂಡರ್ ಆಗಿದ್ದ ಪರಸ್ಥಳದ ವ್ಯಕ್ತಿಗೆ ಟೆಂಡರ್ ಸಿಗದಂತೆ ಒತ್ತಡ ಏರಿ, ಗುತ್ತಿಗೆದಾರರನ್ನು ಬೆದರಿಸಿ ಕಳುಹಿಸಿರುವುದು ನಾಚಿಕೆಗೇಡಿನ ವಿಚಾರ. ಈ ಮೂಲಕ ಪುನಃ ಪ್ರತಿ ವರ್ಷವು ಟೆಂಡರ್ ಪಡೆಯುವ ವ್ಯಕ್ತಿಗೆ ಈ ಗುತ್ತಿಗೆ ಕೆಲಸಗಳು ಸಿಗುವಂತೆ ನೋಡಿಕೊಳ್ಳುವಲ್ಲಿ ಜೆ.ಡಿ.ಎಸ್. ಮುಖಂಡರುಗಳು ಸಫಲರಾಗಿರುತ್ತಾರೆ. ಇಂತಹ ಪವಿತ್ರ ಮತ್ತು ಸುಪ್ರಸಿದ್ಧ ದೇವಸ್ಥಾನದ ಪೂಜಾ ವಿಚಾರದಲ್ಲಿಯು ಕೂಡ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ವಿಚಾರ ಎಂದು ಕಿಡಿಕಾರಿದರು.

ದೇವಾಲಯಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲದ ಮೇಲೆ ಇಷ್ಟೊಂದು ಹಣ ಖರ್ಚು ಮಾಡುವ ಉದ್ದೇಶವಾದರೂ ಏನು? ಎಂಬುದನ್ನು ರಾಜಕೀಯ ವ್ಯಕ್ತಿಗಳು ಮತ್ತು ಅಧಿಕಾರಿಗಳು ಸಾರ್ವಜನಿಕರಿಗೆ ಉತ್ತರಿಸಬೇಕಾಗಿ ಒತ್ತಾಯಿಸುತ್ತೇನೆ . ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಲು ಜೆ.ಡಿ.ಎಸ್ ಮತ್ತು ಬಿ.ಜೆ.ಪಿ. ಮುಖಂಡರುಗಳು ದೇವಸ್ಥಾನದ ವಿಚಾರದಲ್ಲಿ ಹಣ ಮಾಡಿಕೊಳ್ಳುತ್ತಿರುವುದು ನ್ಯಾಯವೇ ? ಇಂತಹ ನೀಚ ಕೃತ್ಯಗಳನ್ನು ನಿಲ್ಲಿಸದಿದ್ದರೆ ಹಾಸನ ಕ್ಷೇತ್ರದ ಜನತೆ ಇವರನ್ನು ಕ್ಷಮಿಸಲಾರದು ಎಂದರು.

ಇಂತಹ ಸನ್ನಿವೇಶವನ್ನು ನೋಡಿಕೊಂಡು ಸುಮ್ಮನಿರಲು ಕಾಂಗ್ರೆಸ್ ಪಕ್ಷವು ಸಿದ್ಧವಿರುವುದಿಲ್ಲ. ಇವರ ದರ್ಪ ಮತ್ತು ದೌರ್ಜನ್ಯದ ವಿರುದ್ಧ ಪ್ರತಿಭಟನೆ ಮಾಡಿಯಾದರೂ ತಡೆಯಲು ಮುಂದಿನ ದಿನಗಳಲ್ಲಿ ನಿರ್ಧರಿಸಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ABOUT THE AUTHOR

...view details