ಹಾಸನ: ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಧರ್ಮಾಧಾರಿತವಾದ ಮೀಸಲಾತಿ ಕೊಡಲು ಎಲ್ಲೂ ಅವಕಾಶ ಇರುವುದಿಲ್ಲ. ಅದನ್ನು ಸರಿಪಡಿಸಿ ಮುಸ್ಲಿಮರಿಗೆ ಆರ್ಥಿಕವಾಗಿ ಹಿಂದುಳಿದ ವರ್ಗದಲ್ಲಿ ಮೀಸಲಾತಿ ಕಲ್ಪಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಹೇಳಿದರು.
ಹಾಸನದ ನಗರದ ಹೊರವಲಯದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಮರಿಗೆ ಮೀಸಲಾತಿ ರದ್ದು ಮಾಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಧರ್ಮಾಧಾರಿತವಾಗಿ ಮೀಸಲಾತಿ ಕೊಡಲು ಆಗುವುದಿಲ್ಲ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಧರ್ಮಾಧಾರಿತ ಮೀಸಲಾತಿ ಕೊಡಲು ಅವಕಾಶ ಇರುವುದಿಲ್ಲ. ವರ್ಗ 1 ಮತ್ತು ವರ್ಗ 2 ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದಲ್ಲೂ ಮುಸ್ಲಿಮರಿಗೆ ಮೀಸಲಾತಿ ಇದೆ. ಬಹಳ ದೊಡ್ಡಮಟ್ಟದಲ್ಲಿ ಎಲ್ಲರಿಗೂ ಸಲ್ಲುವಂತಾ ರೀತಿಯಲ್ಲಿ ಅವರ ಅಪೇಕ್ಷೆಯಂತೆ ಮೀಸಲಾತಿ ನೀಡಲಾಗಿದೆ ಎಂದು ಹೇಳಿದರು.
ಇನ್ನು ಕಾಂಗ್ರೆಸ್ ಸರ್ಕಾರ ಬಂದರೆ ಮುಸ್ಲಿಂ ಮೀಸಲಾತಿ ರದ್ದು ಆದೇಶ ವಾಪಸ್ಸು ಪಡೆಯೋದಾಗಿ ಕೈ ನಾಯಕರ ಹೇಳಿಕೆ ವಿಚಾರಕ್ಕೆ ಉತ್ತರಿಸಿ, ಮೊದಲನೆಯದಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಇನ್ನು ರದ್ದು ಮಾಡಲು ಮುಂದಾದರೇ ಅವರೇ ರದ್ದಾಗಿ ಹೋಗುತ್ತಾರೆ ಎಂದು ವ್ಯಂಗ್ಯವಾಡಿದರು. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರೇ ರದ್ದು ಮಾಡಿ ಮನೆಗೆ ಕಳುಹಿಸುವಂತಹ ಕೆಲಸ ಮಾಡುತ್ತಾರೆ. ಇನ್ನು ಬಸ್ಸಿನಲ್ಲಿ ಹೋಗುವಷ್ಟು ಸೀಟ್ ಕೂಡ ಅವರಿಗೆ ಬರುವುದಿಲ್ಲ ಸಂಪೂರ್ಣವಾಗಿ ಸೋಲಲಿದೆ ಎಂದು ಹೇಳಿದರು.