ಹಾಸನ: ಹಿಂದೆ ಕಾಂಗ್ರೆಸ್ ಪಕ್ಷ ಅಂದ್ರೆ ನೆಹರು ಟೋಪಿ ಇತ್ತು. ಆದ್ರೆ ಇವತ್ತು ಯಾರ್ಯಾರಿಗೆ ಬೇಕೋ ಅವರಿಗೆಲ್ಲಾ ಟೋಪಿ ಹಾಕುವ ಮೂಲಕ ಕಾಂಗ್ರೆಸ್ ಮುಖಂಡರು ಟೋಪಿಯ ಗೌರವ ಕಳೆಯುತ್ತಿದ್ದಾರೆಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ವ್ಯಂಗ್ಯವಾಡಿದ್ದಾರೆ.
ಮಾಜಿ ಸಚಿವ ಹೆಚ್.ಡಿ. ರೇವಣ್ಣ ಮಾಧ್ಯಮದೊಂದಿಗೆ ಮಾತನಾಡಿದರು. ಬುಧವಾರ ಸಂಜೆ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 32 ವರ್ಷ ನೀರಾವರಿ ಇಲಾಖೆ ಕಾಂಗ್ರೆಸ್-ಬಿಜೆಪಿ ಕೈಯಲ್ಲೇ ಇತ್ತು. ಮೇಕೆದಾಟು ಯೋಜನೆಯನ್ನು ಯಾಕೆ ಮಾಡಲಿಲ್ಲ. ಮೇಕೆದಾಟುಗೆ ದೇವೇಗೌಡ್ರ ಕೊಡುಗೆ ಏನಿದೆ ಅಂತಾ ಜನರಿಗೆ ಗೊತ್ತಿದೆ. ಕಾಂಗ್ರೆಸ್ ಇಡೀ ದೇಶದಲ್ಲಿ ಸತ್ತೋಗ್ತಿದೆ. ಹಿಂದೆ ಇದ್ದ ನೆಹರು ಕಾಂಗ್ರೆಸ್ ಇಂದು ಇಲ್ಲ. ಇವತ್ತು ದಿನದಿಂದ ದಿನಕ್ಕೆ ಕಾಂಗ್ರೆಸ್ ನಶಿಸುತ್ತಿದೆ ಎಂದರು.
ಹತ್ತು ವರ್ಷ ಯುಪಿಎ ಸರ್ಕಾರವಿತ್ತು. ನಂತರ ಯಾಕೆ ಎನ್.ಡಿ.ಎ.ಗೆ ಜನರು ಅಧಿಕಾರ ಕೊಟ್ಟರು. ಪ್ರಾದೇಶಿಕ ಪಕ್ಷಗಳನ್ನು ತುಳಿಯೋದಕ್ಕೆ ಹೋದರು. ಅಧಿಕಾರಕ್ಕೆ ಬರಬೇಕಾದ ಜಾತ್ಯಾತೀತ ಪಕ್ಷಗಳು ಒಂದಾಗಬೇಕು ಎಂದ್ರು. ತುಮಕೂರಲ್ಲಿ ದೇವೇಗೌಡರನ್ನು, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು, ಕೋಲಾರದಲ್ಲಿ ಮುನಿಯಪ್ಪನವರನ್ನು ಸೋಲಿಸೋದಕ್ಕೆ ಕಾಂಗ್ರೆಸ್ ಪಕ್ಷ ಕೋಮುವಾದಿಗಳ ಜೊತೆ ಕೈಜೋಡಿಸಲಿಲ್ಲವೇ..? ಸೋಲಿಸೋದಕ್ಕೆ ಕಾಂಗ್ರೆಸ್ನ ಸಿ ಟೀಂ ಕೆಲಸ ಮಾಡಲಿಲ್ವಾ. ಇಲ್ಲ ಅಂತಾ ದೇವರ ಮುಂದೆ ಹೇಳಲಿ ನೋಡೋಣ ಎಂದು ಸವಾಲೆಸೆದರು.
ದೇವೇಗೌಡ್ರು ಹಾಗೂ ಕುಮಾರಸ್ವಾಮಿ ಯಾವತ್ತಿಗೂ ಕೊಟ್ಟ ಮಾತಿಗೆ ತಪ್ಪಿಲ್ಲ. ಮೋದಿಯವರು ಐದು ವರ್ಷ ನೀವೇ ಮುಖ್ಯಮಂತ್ರಿಯಾಗಿರಿ ಅಂತಾ ಹೇಳಿದ್ರು. ಬೇಕಿದ್ರೆ ನಾನು ಮತ್ತು ಕುಮಾರಸ್ವಾಮಿ ಪ್ರಮಾಣ ಮಾಡುತ್ತೇವೆ. ಎಂಪಿ ಐದು ಸೀಟ್ ಕೊಡ್ತೇವೆ. ಕೇಂದ್ರದಲ್ಲಿ ಎರಡು ಸಚಿವ ಸ್ಥಾನ ಕೊಡ್ತೇವೆ ಅಂದಿದ್ರು. ಒಳ ಒಪ್ಪಂದ ಮಾಡ್ಕೊಳ್ಳೋ ಹಾಗಿದ್ರೆ ಮಾಡ್ಕೋಬಹುದಿತ್ತಲ್ವಾ. ಆದ್ರೆ ಕಾಂಗ್ರೆಸ್ನವರು ನಮಗೆ ಬಿಜೆಪಿಯ ಬಿ ಟೀಂ ಎಂದು ಹೇಳುತ್ತಾರೆ.
ಕಾಂಗ್ರೆಸ್ ಪಕ್ಷ ಅಂದ್ರೆ ನೆಹರು ಟೋಪಿ ಇತ್ತು. ಆದ್ರೆ ಇವತ್ತು ಯಾರಿಗೆ ಬೇಕೋ ಅವರಿಗೆಲ್ಲಾ ಟೋಪಿ ಹಾಕ್ತಿದ್ದಾರೆ ಎಂದು ಟೀಕಿಸಿದ ಅವರು, ಟೋಪಿಗಿರೋ ಗೌರವವನ್ನೂ ಕಳೆಯುತ್ತಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದೋರು ಟೋಪಿ ಹಾಕಿಕೊಳ್ಳಿ ಎಂದು ನೆಹರು ಕೊಟ್ಟಿದ್ರು. ಆದರೆ ಇವರು ಪ್ರಾದೇಶಿಕ ಪಕ್ಷಕ್ಕೆ, ಯಾರಿಗೆ ಯಾವ ಟೋಪಿ ಹಾಕ್ಬೇಕು ಅಂತಾ ತಿಳಿದುಕೊಂಡು ಟೋಪಿ ಹಾಕ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇಂದು ಬೆಳಗ್ಗೆ 10 ಗಂಟೆಗೆ ಹಾಸನದಲ್ಲಿ ಜಿಲ್ಲಾ ಮಟ್ಟದ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಮಾವೇಶದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ್ರು, ರಾಜ್ಯಾಧ್ಯಕ್ಷರಾದ ಇಬ್ರಾಹಿಂ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ 60 ವರ್ಷದ ರಾಜಕಾರಣದಲ್ಲಿ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಅವರ ಕೊಡುಗೆ ಏನು ಅಂತಾ ಈ ವೇಳೆ ತಿಳಿಸಲಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ:2024ರಲ್ಲಿ ಯುಪಿಎ-3 ಸರ್ಕಾರ ತರಲು ತಂತ್ರಗಾರಿಕೆ ಮಾಡುತ್ತಿದ್ದೇವೆ: ವೀರಪ್ಪ ಮೊಯ್ಲಿ