ಕರ್ನಾಟಕ

karnataka

ETV Bharat / state

ತೈಲ ಬೆಲೆ ಏರಿಕೆಗೆ ಖಂಡನೆ: ಹಾಸನದಲ್ಲಿ 'ಕೈ' ನಾಯಕರಿಂದ ಬೃಹತ್ ಪ್ರತಿಭಟನೆ

ಬಿಜೆಪಿ ಪಕ್ಷದಿಂದ ಒಳ್ಳೆಯ ದಿನಗಳು ಬರುತ್ತವೆ ಎಂದು ಭರವಸೆ ನೀಡಿದ್ದು, ಎಲ್ಲವೂ ಉಲ್ಟಾ ಹೊಡೆದಿದೆ. ಈಗ ಬಿಜೆಪಿ ನಾಯಕರು ಮೌನವಾಗಿದ್ದಾರೆ. ಜನಸಾಮಾನ್ಯರ ಮೇಲೆ ಪ್ರತಿನಿತ್ಯ ಒಂದಲ್ಲ ಒಂದು ರೀತಿ ಬೆಲೆ ಏರಿಕೆಯ ಬರೆ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್​ ಕಿಡಿಕಾರಿದೆ.

condemning-oil-price-hike-hasana-congress-protest
ಹಾಸನದಲ್ಲಿ 'ಕೈ' ನಾಯಕರಿಂದ ಬೃಹತ್ ಪ್ರತಿಭಟನೆ

By

Published : Feb 23, 2021, 9:27 PM IST

ಹಾಸನ: ಯುಪಿಎ ಸರ್ಕಾರವಿದ್ದಾಗ 51 ರೂಪಾಯಿ ಇದ್ದ ಪೆಟ್ರೋಲ್ ಬೆಲೆ ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಇಂದು ನೂರು ರೂಪಾಯಿ ಆಗಿದ್ದು, ಬಿಜೆಪಿಯವರು ಸಾಮಾನ್ಯ ಜನರಿಗೆ ನಂಬಿಕೆ ದ್ರೋಹ ಬಗೆಯುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಾಸನದಲ್ಲಿ 'ಕೈ' ನಾಯಕರಿಂದ ಬೃಹತ್ ಪ್ರತಿಭಟನೆ

ಓದಿ: 'ಕಾಂಗ್ರೆಸ್​ ಸೇರೋದಾದರೆ ರತ್ನಗಂಬಳಿ ಹಾಕಿ ಸ್ವಾಗತಿಸುತ್ತಾರೆ':ವರ್ತೂರು ಪ್ರಕಾಶ್​

ಇಂದು ಹಾಸನ ಜಿಲ್ಲಾ ಕಾಂಗ್ರೆಸ್ ವತಿಯಿಂದ ತೈಲ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಕಾಂಗ್ರೆಸ್​ ನಾಯಕರು ಮಾತನಾಡಿದರು. ದೇಶದ ಹಲವೆಡೆ ಪೆಟ್ರೋಲ್ ಬೆಲೆ ಲೀಟರ್​ಗೆ 100 ರೂ. ಆಗಿದೆ. ಆದರೂ ಮೋದಿ ಸರ್ಕಾರ ಜನರ, ಅಲ್ಪಸಂಖ್ಯಾತರ, ದಲಿತರ ಸಮಸ್ಯೆಗಳನ್ನು ಪರಿಹರಿಸಲು ಏನು ಕ್ರಮ ಕೈಗೊಂಡಿಲ್ಲ.

ಬಿಜೆಪಿ ಪಕ್ಷದಿಂದ ಒಳ್ಳೆಯ ದಿನಗಳು ಬರುತ್ತವೆ ಎಂದು ಭರವಸೆ ನೀಡಿದ್ದು, ಎಲ್ಲವೂ ಉಲ್ಟಾ ಹೊಡೆದಿದೆ. ಈಗ ಬಿಜೆಪಿ ನಾಯಕರು ಮೌನವಾಗಿದ್ದಾರೆ. ಜನಸಾಮಾನ್ಯರ ಮೇಲೆ ಪ್ರತಿನಿತ್ಯ ಒಂದಲ್ಲ ಒಂದು ರೀತಿ ಬೆಲೆ ಏರಿಕೆಯ ಬರೆ ಹಾಕುತ್ತಿದ್ದಾರೆ. ಪೆಟ್ರೋಲ್, ಡೀಸೆಲ್, ಗ್ಯಾಸ್, ಅಡುಗೆ ಎಣ್ಣೆ ಸೇರಿದಂತೆ ಪ್ರತಿದಿನ ಬಳಕೆ ಮಾಡುವ ಪದಾರ್ಥಗಳ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಕಾಂಗ್ರೆಸ್ ಸರ್ಕಾರದಲ್ಲಿ ಪೆಟ್ರೋಲ್ ಲೀಟರ್​​​ಗೆ 63 ರೂ. ಇತ್ತು. ಸಿಲಿಂಡರ್ 350ರಿಂದ 400 ರೂ.ಗಳಿಗೆ ಸಿಗುತ್ತಿತ್ತು. ಇಂದು ಆಟೋಗಳಿಗೆ ಬಳಸುವ ಗ್ಯಾಸ್ ದರ ಕೂಡ ಹೆಚ್ಚಳವಾಗಿದೆ. ಇದು ಜನಸಾಮಾನ್ಯನಿಗೆ ಹೊರೆಯಾಗಿದ್ದು, ಕೂಡಲೇ ಬೆಲೆಗಳನ್ನು ಇಳಿಕೆ ಮಾಡಬೇಕು ಎಂದು ಆಗ್ರಹ ಮಾಡಿದರು.

ಇಂದು ಕಾಂಗ್ರೆಸ್ ಕಚೇರಿಯಿಂದ ಪ್ರತಿಭಟನೆ ಹೊರಟು, ನಗರದ ಎನ್​​ಆರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನಂತರ ವೃತ್ತದಲ್ಲೇ ಅಡುಗೆ ಮಾಡಿ ಕೆಲಕಾಲ ಪ್ರತಿಭಟನೆ ಮಾಡಿದರು. ಈ ವೇಳೆ ಜಟಕಾಗಾಡಿ, ಆಟೋಗಳು, ಖಾಲಿ ಸಿಲಿಂಡರ್ ಪ್ರದರ್ಶನ, ಕುದುರೆ ಮೇಲೆ ವ್ಯಕ್ತಿಯನ್ನು ಕೂರಿಸಿ ಆತನಿಗೆ ಪ್ರಧಾನಿ ಮೋದಿ ಭಾವಚಿತ್ರ ಅಂಟಿಸಿ ಸವಾರಿ ಮಾಡಿಸಿ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details