ಹಾಸನ:ವಾರದಲ್ಲಿ ಮೂರು ದಿನ ಮಾತ್ರ ಬೆಳಗ್ಗೆ 6ರಿಂದ 10ರ ತನಕ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿ, ಉಳಿದ ನಾಲ್ಕು ದಿನ ಸಂಪೂರ್ಣ ಲಾಕ್ಡೌನ್ಗೆ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮನವಿ ಮಾಡಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಕೆ.ಸುಧಾಕರ್ ಹೇಳಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕೋವಿಡ್-19 ಜಿಲ್ಲಾ ಮಟ್ಟದ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾರದಲ್ಲಿ ಮೂರು ದಿನ ವಹಿವಾಟಿಗೆ ವಿನಾಯಿತಿ ನೀಡಿ ಉಳಿದ ನಾಲ್ಕು ದಿನ ಸಂಪೂರ್ಣ ಲಾಕ್ಡೌನ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಕೋರಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮಾಧ್ಯಮಗಳ ಜತೆ ಮಾತನಾಡಿದ ಡಾ. ಸುಧಾಕರ್ ಜಿಲ್ಲೆಯಲ್ಲಿ ರೆಮ್ಡೆಸಿವಿರ್ ಇಂಜೆಕ್ಷನ್, ಚುಚ್ಚುಮದ್ದು, ಆಕ್ಸಿಜನ್ ಹಾಗೂ ಆರೋಗ್ಯ ಸಿಬ್ಬಂದಿ ಕೊರತೆ ಬಗ್ಗೆ ಶಾಸಕರು ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎಂದರು.
ಆಕ್ಸಿಡೆಂಟ್ ಪ್ಲಾಂಟ್ ಜನರೇಟರ್ಸ್ಗಳನ್ನ ಶೀಘ್ರದಲ್ಲಿ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ. ರೋಗಿಗಳನ್ನು ಆರೈಕೆ ಮತ್ತು ನಿರ್ವಹಣೆಗೆ ಕೊನೆಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಸೂಚನೆ ನೀಡಿದ್ದೇನೆ. ದುಡ್ಡು ಕೊಟ್ಟರೆ ಬೆಡ್ ಸಿಗುತ್ತದೆ ಎಂಬ ಆರೋಪ ಕೇಳಿಬಂದಿದೆ. ಈ ರೀತಿ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲು ನೋಡಲ್ ಅಧಿಕಾರಿಯನ್ನು ನೇಮಿಸಬೇಕು ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಅಂತಹ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸೋಮವಾರದಿಂದ ರಾಜ್ಯಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ತೀರ್ಮಾನಿಸಲಾಗಿತ್ತು. ಸುಮಾರು 3.5 ಕೋಟಿಯಷ್ಟು ಲಸಿಕೆ ಬೇಕಾಗಿತ್ತು. ಆದರೆ, ಲಾಕ್ಡೌನ್ ಆರಂಭದಿಂದಾಗಿ ಕೆಲವು ಜಿಲ್ಲೆಗಳಿಗೆ ಲಸಿಕೆ ನೀಡಲು ಸಾಧ್ಯವಾಗಿಲ್ಲ. ಆನ್ಲೈನ್ ಮುಖಾಂತರ ನೋಂದಣಿ ಮಾಡಿಕೊಂಡವರು ಮಾತ್ರ ಬಂದಿದ್ದರು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರ ತಿಳಿಸುತ್ತೇವೆ ಎಂದು ಹೇಳಿದರು.