ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ರಂಗು ಪಡೆದುಕೊಂಡ ಚುನಾವಣೆ ಹಾಸನ: ಮಾಜಿ ಪ್ರಧಾನಿಗಳ ತವರೂರು, ಗೊಮ್ಮಟನ ನೆಲೆಬೀಡು, ಶಿಲ್ಪ ಕಲೆಗಳಿಗೆ ಹೆಸರಾದ ಹಾಸನದಲ್ಲಿ ಚುನಾವಣಾ ಕಾವು ಜೋರಾಗಿದೆ. ಜೆಡಿಎಸ್ ಭದ್ರಕೋಟೆಯಾಗಿರುವ ಹಾಸನ ಕ್ಷೇತ್ರದಲ್ಲಿ ಕಳೆದ ಬಾರಿ ಕಮಲ ಅರಳಿಸಿದ ಪ್ರೀತಂ ಗೌಡ ಬಿಜೆಪಿಯಿಂದ ಮತ್ತೆ ಕಣದಲ್ಲಿದ್ದರೆ, ಜೆಡಿಎಸ್ನಿಂದ ಸ್ವರೂಪ್ ಪ್ರಕಾಶ್ ಸ್ಪರ್ಧೆಯೊಡ್ಡಿದ್ದಾರೆ. ಕಾಂಗ್ರೆಸ್ನಿಂದ ಬಿ.ಕೆ.ರಂಗಸ್ವಾಮಿ ಕಣದಲ್ಲಿದ್ದಾರೆ. ತ್ರಿಕೋನ ಸ್ಪರ್ಧೆ ಇದ್ದರೂ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ.
ಸವಾಲಿಗೆ ಸವಾಲು, ಏಟಿಗೆ ಎದುರೇಟು ನೀಡುವ ಮೂಲಕ ಹಾಲಿ ಶಾಸಕ, ಬಿಜೆಪಿಯ ಅಭ್ಯರ್ಥಿ ಪ್ರೀತಂಗೌಡ ಗೆಲ್ಲುವ ಉತ್ಸಾವ ಮಾತುಗಳನ್ನಾಡಿದ್ದರೆ, ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ದೇವೇಗೌಡರ ಕುಟುಂಬದ ಸದಸ್ಯರು ಸ್ವರೂಪ್ ಪ್ರಕಾಶ್ ಗೆಲುವು ಖಚಿತ ಎಂಬ ಮಾತುಗಳನ್ನಾಡಿದ್ದಾರೆ. ನೇರಾ ನೇರ ಹಣಾಹಣಿಯಲ್ಲಿ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳ ಅಭ್ಯರ್ಥಿಗಳು ಕೂಡ ತಮ್ಮ ತಮ್ಮ ಕಾರ್ಯಕರ್ತರ ಪಡೆಯೊಂದಿಗೆ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಜೆಡಿಎಸ್ ಅಭ್ಯರ್ಥಿಯ ಟಿಕೆಟ್ ಘೋಷಣೆಯಿಂದ ಹಾಸನ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಭವಾನಿ ರೇವಣ್ಣ ಈ ಬಾರಿ ಟಿಕೆಟ್ ನಮಗೆ ನೀಡುವಂತೆ ಪಟ್ಟು ಹಿಡಿದಿದ್ದರಿಂದ ಕೆಲಕಾಲ ಗೊಂದಲ ಮೂಡಿತ್ತು. ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಸಾಮಾನ್ಯ ಕಾರ್ಯಕರ್ತ ಸ್ವರೂಪ್ ಪ್ರಕಾಶ್ಗೆ ಟಿಕೆಟ್ ನೀಡುವ ಮೂಲಕ ಭವಾನಿ ರೇವಣ್ಣ ಅವರ ಮನವೊಲಿಸುವಲ್ಲಿ ಯಶ ಕಂಡರು. ಸದ್ಯ ಅಭ್ಯರ್ಥಿ ಸ್ವರೂಪ್ ಪರ ಭವಾನಿ ರೇವಣ್ಣ ಸೇರಿದಂತೆ ಮತಬೇಟೆಗೆ ಇಳಿದಿದ್ದಾರೆ. ಪ್ರಚಾರದ ಭರಟೆ ಜೋರಾಗಿದ್ದು, ಕಳೆದ ಬಾರಿಯ ಸೋಲು ಮರೆಯದ ಹೆಚ್ ಡಿ ರೇವಣ್ಣ, ಮುಯ್ಯಿ ತೀರಿಸುವ ಮಾತುಗಳನ್ನಾಡುತ್ತಿದ್ದರೆ, ಹಳೇ ಗೆಲುವಿನ ಉತ್ಸಾಹದಲ್ಲಿರುವ ಪ್ರೀತಂ ಗೌಡ, ಬಿಜೆಪಿಗೆ ಐವತ್ತಲ್ಲ, 1 ಲಕ್ಷ ಮತ ಬರುತ್ತೆ, ಬರೆದಿಟ್ಟುಕೊಳ್ಳಿ ಅಂತ ಸವಾಲಿಗೆ ಸವಾಲು ಹಾಕಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದ್ಯ ಕ್ಷೇತ್ರ ರೇವಣ್ಣ ಕುಟುಂಬ ಹಾಗೂ ಪ್ರೀತಂ ಗೌಡ ನಡುವೆ ಜಿದ್ದಾಜಿದ್ದಿ ಕಣವಾಗಿದೆ.
ಈ ಕ್ಷೇತ್ರದಲ್ಲಿ ಒಕ್ಕಲಿಗರು ಅದರಲ್ಲೂ ಅದರ ಒಳಪಂಗಡವಾಗಿರುವ ದಾಸ ಒಕ್ಕಲಿಗರೇ ಹೆಚ್ಚು. ಈ ಸಮುದಾಯದವರಿಗೆ ಜೆಡಿಎಸ್ ಮೊದಲಿನಿಂದಲೂ ಟಿಕೆಟ್ ಕೊಡುತ್ತಾ ಬಂದಿದ್ದರಿಂದ ಸಮುದಾಯದ ವ್ಯಕ್ತಿಯನ್ನೇ ಗೆಲ್ಲಿಸುತ್ತಾ ಬಂದಿದ್ದರು. ಆದರೆ, ಕಳೆದ ಬಾರಿ ಬಿಜೆಪಿ ಪಾಲಾಗಿತ್ತು. ಹಾಗಾಗಿ ಈ ಬಾರಿ ಎಚ್ಚರಿಕೆ ಹೆಜ್ಜೆ ಇಟ್ಟಿರುವ ಜೆಡಿಎಸ್, ಮತ್ತೆ ಕ್ಷೇತ್ರದ ಪ್ರಾಬಲ್ಯ ಸಾಧಿಸುವ ಉತ್ಸಾಹದಲ್ಲಿದೆ. ಆದರೆ, ಇದೀಗ ಸ್ಪರ್ಧೆಗಿಳಿದಿರುವ ಜೆಡಿಎಸ್ ಮತ್ತು ಬಿಜೆಪಿ ಇಬ್ಬರು ಅಭ್ಯರ್ಥಿಗಳು ದಾಸ ಒಕ್ಕಲಿಗರೇ ಆಗಿರುವುದರಿಂದ ಮತಗಳು ವಿಭಜನೆಗೊಂಡು ಹರಿದು ಹಂಚು ಹೋಗಲಿವೆ. ಹಾಗಾಗಿ ಇಬ್ಬರೂ ಅಭ್ಯರ್ಥಿಗಳು ಇತರ ಸಮುದಾಯಗಳ ಮತಗಳನ್ನು ಸೆಳೆಯುವಲ್ಲಿ ಅರಸಹಸ ಪಡುತ್ತಿದ್ದಾರೆ. ಬಿಜೆಪಿಯ ಪ್ರೀತಂ ಗೌಡ ಲಿಂಗಾಯಿತ ಅಲ್ಪಸಂಖ್ಯಾತ ಮತ್ತು ಪರಿಶಿಷ್ಟ ಜಾತಿ ಪಂಗಡದ ಮೇಲೆ ಕಣ್ಣು ಭರವಸೆ ಇಟ್ಟಿದ್ದರೆ, ಜೆಡಿಎಸ್ನ ಸ್ವರೂಪ್ ಪ್ರಕಾಶ್ ತಮ್ಮದೆ ಆದ ಸಮುದಾಯಗಳ ಮತಗಳ ಮೇಲೆ ವಿಶ್ವಾಸವಿಟ್ಟಿದ್ದಾರೆ. ಹಾಗಾಗಿ ಕ್ಷೇತ್ರದಲ್ಲಿ ನೇರ ಪೈಪೋಟಿ ಇದ್ದು ಯಾರು ಗೆಲ್ಲಲಿದ್ದಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ಸ್ಥಳೀಯ ಮತದಾರರು.
ಇದನ್ನೂ ಓದಿ:ಕಟ್ಟಾ ಜಗದೀಶ್‌ಗೆ ಚೊಚ್ಚಲ ಗೆಲುವಿನ ನಿರೀಕ್ಷೆ; ಭೈರತಿಗೆ ಮತ್ತೆ ಚುಕ್ಕಾಣಿ ಹಿಡಿಯುವ ತವಕ