ಹಾಸನ: ಅರಸೀಕೆರೆ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ 9 ಮಂದಿಯ ಕುಟುಂಬದವರಿಗೆ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವರಾದ ಕೆ. ಗೋಪಾಲಯ್ಯ ನಿನ್ನೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ತಲಾ 5 ಲಕ್ಷ ರೂ. ಚೆಕ್ ವಿತರಣೆ ಮಾಡಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರವು ಮೃತರ ಕುಟುಂಬಕ್ಕೆ ಸಾಂತ್ವನ ಹೇಳುವ ಜೊತೆಗೆ ಆರ್ಥಿಕ ನೆರವು ಒದಗಿಸಿದೆ. ಮತ್ತು ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರದ ವತಿಯಿಂದಲೇ ಬರಿಸಲಾಗುವುದು. ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 4 ಜನ ಗಾಯಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದ್ದು, ಗಾಯಾಳುಗಳಿಗೆ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ಹಾಸನ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೆ ಗೋಪಾಲಯ್ಯ ಈಗಾಗಲೇ ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳ ತಂಡದೊಂದಿಗೆ ಸ್ಥಳ ಪರಿಶೀಲನೆ ಮಾಡಲಾಗಿದ್ದು, ಜಾಗದ ನ್ಯೂನತೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಈ ರೀತಿಯ ಘಟನೆಗಳು ಮತ್ತೆ ಮರುಕಳಿಸದಂತೆ ಕಟ್ಟೆಚ್ಚರ ವಹಿಸಲಾಗುವುದು ಎಂದು ಸಚಿವರು ಇದೇ ವೇಳೆ ಭರವಸೆ ನೀಡಿದರು.
ಇದನ್ನೂ ಓದಿ:ಹಾಸನ ಬಳಿ ಭೀಕರ ಅಪಘಾತಕ್ಕೆ 9 ಮಂದಿ ಸಾವು: 5-6 ಕಿಮೀ ಸಾಗಿದ್ರೆ ಮನೆ ಸೇರ್ತಿದ್ದ ಕುಟುಂಬದ ಮೇಲೆ ಜವರಾಯನ ಅಟ್ಟಹಾಸ
ಇದೇ ಸಂದರ್ಭದಲ್ಲಿ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಸರ್ಕಾರದ ವತಿಯಿಂದ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಒದಗಿಸಿರುವುದು ಶ್ಲಾಘನೀಯ. ಇದೇ ರೀತಿ ಗಾಯಾಳುಗಳಿಗೂ ಪರಿಹಾರ ಒದಗಿಸಿ ಎಂದು ಮನವಿ ಮಾಡಿದರು. ಈ ವೇಳೆ ಎಡಿಸಿ ಕವಿತಾ ರಾಜಾರಾಂ, ಜಿಪಂ ಸಿಇಒ ಕಾಂತರಾಜ್ ಇದ್ದರು.
ಬೊಮ್ಮಾಯಿ, ಯಡಿಯೂರಪ್ಪ ನಾಯಕತ್ವದಲ್ಲಿ ಚುನಾವಣೆ: ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 2023ರ ಚುನಾವಣೆಯನ್ನ ಬಸವರಾಜ ಬೊಮ್ಮಾಯಿ ಮತ್ತು ಯಡಿಯೂರಪ್ಪ ನಾಯಕತ್ವದಲ್ಲಿ ಎದುರಿಸಿ ಮತ್ತೊಮ್ಮೆ ಬಿಜೆಪಿ ಪಕ್ಷ ರಾಜ್ಯದಲ್ಲಿ ಅಧಿಕಾರ ಹಿಡಿಯಲಿದೆ ಎಂದು ಸಚಿವ ಕೆ ಗೋಪಾಲಯ್ಯ ಭರವಸೆ ನೀಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರದಲ್ಲಿ ಮುಂದುವರೆಯಲು ಆರ್ಎಸ್ಎಸ್ ನವರ ಕಾಲಿಗೆ ಬೀಳಬೇಕು ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿ, ಆರ್ಎಸ್ಎಸ್ ಸಂಘಟನೆ ರಾಜ್ಯ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಬಿಟ್ಟಿದೆ. ನನಗೆ 2 ದೊಡ್ಡ ಜಿಲ್ಲೆ ಉಸ್ತುವಾರಿ ಕೊಟ್ಟಿರುವುದೇ ಸಾಕ್ಷಿ ಎಂದರು.
ಇದನ್ನೂ ಓದಿ:RSS ಬಗ್ಗೆ ಸಿದ್ದರಾಮಯ್ಯ ಅಪಪ್ರಚಾರ ಮಾಡುತ್ತಿದ್ದಾರೆ: ಸಿಎಂ ಬಸವರಾಜ ಬೊಮ್ಮಾಯಿ
ಸಿಎಂಗೆ ದಮ್ಮಿದ್ದರೆ ಸಿದ್ದರಾಮಯ್ಯ ಕಾಲದ ಹಗರಣಗಳನ್ನು ತನಿಖೆ ಮಾಡಲಿ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒತ್ತಾಯಕ್ಕೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಕಾಲದ ಹಗರಣ ಪಟ್ಟಿ ಮಾಡಿ ಕಾಂಗ್ರೆಸ್ ಹೈಕಮಾಂಡ್ಗೆ ಕಳುಹಿಸಲಾಗುವುದು. ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದರಿಂದ ಕರ್ನಾಟಕ ರಾಜ್ಯದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಗಟ್ಟಿಯಾಗಿದೆ ಎಲ್ಲರೂ ಒಗಟ್ಟಾಗಿ ಚುನಾವಣೆ ಎದುರಿಸಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಪುನರ್ ಉಚ್ಚರಿಸಿದರು.
ಇದನ್ನೂ ಓದಿ:ಬಿಜೆಪಿ ಆರ್ಎಸ್ಎಸ್ ವಿರುದ್ಧ ಕಾಂಗ್ರೆಸ್ನಿಂದ ನಿಜವಾದ ಹೋರಾಟ: ಮಲ್ಲಿಕಾರ್ಜುನ ಖರ್ಗೆ
ಮಳೆ ಹೆಚ್ಚು ಇರುವುದರಿಂದ ರಸ್ತೆ ಕಾಮಗಾರಿಗಳು ಸಾಗುತ್ತಿಲ್ಲ. ಮಳೆ ನಿಂತ ಮೇಲೆ ಎಲ್ಲ ಗುಂಡಿಗಳನ್ನ ಮುಚ್ಚಲು ಸೂಚನೆ ಕೊಡಲಾಗುವುದು ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಪಿ.ಸುರೇಶ್, ಯೋಗಾರಮೇಶ್ ಇತರರು ಉಪಸ್ಥಿತರಿದ್ದರು.