ಚನ್ನರಾಯಪಟ್ಟಣ(ಹಾಸನ):ವೇದಿಕೆಯ ಮೇಲೆಯೇ ಕಾಂಗ್ರೆಸ್ ಎಂಎಲ್‌ಸಿ ಗೋಪಾಲಸ್ವಾಮಿ ಹಾಗೂ ಜೆಡಿಎಸ್ ಶಾಸಕ ಬಾಲಕೃಷ್ಣ ನಡುವೆ ಜಟಾಪಟಿ ನಡೆಯಿತು. ಶಾಸಕರ ಮಾತು ಕೇಳಿಅಧಿಕಾರಿಗಳು, ಆಮಂತ್ರಣವನ್ನು ಮನೆಗೆ ತಂದು ಎಸೆದು ಹೋಗುತ್ತಾರೆ ಎಂದು ಎಂಎಲ್‌ಸಿ ಗೋಪಾಲಸ್ವಾಮಿ ಆರೋಪ ಮಾಡಿದ್ದು, ಅಲ್ಲೇ ಇದ್ದ ಜೆಡಿಎಸ್ ಶಾಸಕ ಬಾಲಕೃಷ್ಣ ನಾನು ಆ ರೀತಿ ನಡೆದುಕೊಂಡಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನ ವಿವಿಧ ಕಾಮಗಾರಿ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಪಾಲ್ಗೊಂಡಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡುವಾಗ ತಾಲೂಕಿನ ಅಭಿವೃದ್ಧಿಗೆ ತಾವು ಮಾಡಿರುವ ಹೋರಾಟದ ಬಗ್ಗೆ ಪ್ರಸ್ತಾಪಿಸಿದ ಎಂಎಲ್‌ಸಿ ಗೋಪಾಲಸ್ವಾಮಿ, ಅಧಿಕಾರಿಗಳು ಸಚಿವರ ಕಾರ್ಯಕ್ರಮಕ್ಕೆ ತಮ್ಮನ್ನು ಸರಿಯಾಗಿ ಕರೆದಿಲ್ಲ ಎಂದು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ರು.
ಚನ್ನರಾಯಪಟ್ಟಣದಲ್ಲಿ ನಡೆದ ಕಾಮಗಾರಿ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮ ಈ ವೇಳೆ ಅಧಿಕಾರಿಗಳಿಗೆ ಬಹಿರಂಗ ಎಚ್ಚರಿಕೆ ನೀಡಿದ ಗೋಪಾಲಸ್ವಾಮಿ, ನಾನು ಕೂಡ ಒಬ್ಬ ವಿಧಾನಪರಿಷತ್ ಸದಸ್ಯ ಎಂಬ ಗೌರವ ಇರಲಿ. ನನಗೆ ಟಿಪಿ ನೋಡಿದ ನಂತರ ಉಸ್ತುವಾರಿ ಸಚಿವರು ಬರುತ್ತಿರುವುದು ಗೊತ್ತಾಯಿತು. ಇದು ಸಚಿವರೆದುರು ಅಧಿಕಾರಿಗಳಿಗೆ ಕೊನೆ ಎಚ್ಚರಿಕೆ. ಶಾಸಕರು ಹೇಳಿದ್ರು ಎಂದು ಆಮಂತ್ರಣ ಎಸೆದು ಹೋಗುವ ಪರಿಸ್ಥಿತಿ ನಿರ್ಮಾಣ ಆಗಬಾರದು ಎಂದು ಬೇಸರ ಹೊರ ಹಾಕಿದ್ರು.
ನಂತರ ಮಾತನಾಡಿದ ಶಾಸಕ ಬಾಲಕೃಷ್ಣ, ಇಂದಿನ ಕಾರ್ಯಕ್ರಮ ನಡೆಯಲು ತಾವು ಪಟ್ಟ ಶ್ರಮದ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದ್ರು. ನಂತರ ಗೋಪಾಲಸ್ವಾಮಿ ಅವರ ಆರೋಪಕ್ಕೆ ವೇದಿಕೆ ಮೇಲೆ ಸಮಜಾಯಿಷಿ ನೀಡಿದ ಅವರು, ಎಂಎಲ್‌ಸಿ ಹೇಳಿದ ರೀತಿ ನಾನು ಸಣ್ಣ ರಾಜಕಾರಣ ಮಾಡಿಲ್ಲ. ಮಂತ್ರಿಗಳು ಬರುತ್ತಿದ್ದಾರೆ ಎಂದು ನಾನೇ ನಿಮಗೆ ಹೇಳಿದ್ದೆ. ಆದರೆ, ನಿಮಗೆ ಆಮಂತ್ರಣ ತಡವಾಗಿ ನೀಡಿ ಎಂದು ನಾನು ಹೇಳಿಲ್ಲ. ಈ ಬಗ್ಗೆ ದಯಮಾಡಿ ತಪ್ಪಾಗಿ ತಿಳಿಯಬೇಡಿ ಎಂದು ಮನವಿ ಮಾಡಿದ್ರು.