ಹಾಸನ:ಮಧ್ಯಪ್ರದೇಶ ಚುನಾವಣಾ ಪ್ರಚಾರದಲ್ಲಿ ಕರ್ನಾಟಕದ ವಿಚಾರ ಮಾತಾಡೋದು ಏನಿರುತ್ತೆ?. ಮೊದಿಯವರಿಗೆ ನಮ್ಮ ಬಗ್ಗೆ ಭಯ ಇರಬಹುದೇನೋ ಅಂತ ಅಂದುಕೊಂಡಿದ್ದೀನಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಹಾಸನಾಂಬೆ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ಧ ದುರಹಂಕಾರದಿಂದ ಮಾತನಾಡುತ್ತಿದ್ದಾರೆ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಮೋದಿಯವರು ನನ್ನ ಬಗ್ಗೆ ಮಾತನಾಡಬಹುದಾ? ಮಧ್ಯಪ್ರದೇಶ ಚುನಾವಣಾ ಪ್ರಚಾರದಲ್ಲಿ ಕರ್ನಾಟಕದ ವಿಚಾರ ಮಾತಾಡೋದು ಏನಿರುತ್ತೆ?. ಚುನಾವಣಾ ಪ್ರಚಾರ ಮಾಡಬೇಕು ಅಷ್ಟೇ, ಮೋದಿಯವರಿಗೆ ನಮ್ಮ ಬಗ್ಗೆ ಭಯ ಇರಬೋದೇನೋ ಎಂದರು.
ಮುಂದುವರೆದು, 'ಕೇವಲ ಶಾಸಕರನ್ನು ಸೆಳೆಯೋ ಕೆಲಸ ಮಾಡುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಯಾವತ್ತು ಸತ್ಯ ಹೇಳಿದ್ದಾರೆ?, ಎಲ್ಲ ಬರಿ ಸುಳ್ಳೇ ಹೇಳೋದು. ಅದು ಬಿಟ್ಟರೆ ಅವರಿಗೆ ಬೇರೆ ಕೆಲಸ ಇಲ್ಲ ಎಂದರು. ಕಿಯೋನಿಕ್ಸ್ ಅಧಿಕಾರಿ ಸಂಗಪ್ಪ ಲಂಚ ಕೇಳಿದ ಆರೋಪ ವಿಚಾರದ ಬಗ್ಗೆ ಮಾತನಾಡುತ್ತ,ನಾನು ಈ ಬಗ್ಗೆ ವಿಚಾರಣೆ ಮಾಡುತ್ತೇನೆ. ಅದು ಸತ್ಯವಾಗಿದ್ದರೆ ತನಿಖೆ ಮಾಡಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಸಿಎಂ ಭರವಸೆ ನೀಡಿದರು.
ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ಹಿಂಗಾರು ಮಳೆ ಉತ್ತಮವಾಗಲಿ ಎಂದು ಹಾಸನಾಂಬೆಗೆ ಪ್ರಾರ್ಥನೆ ಮಾಡಿದ್ದೇನೆ ಎಂದು ತಿಳಿಸಿದರು. ಹಾಗೇ ಮಾತನಾಡುತ್ತ, ಬರದ ವಿಚಾರದಲ್ಲಿ ನಾವು ಕೇಂದ್ರದ ಮೇಲೆ ಬೊಟ್ಟು ಮಾಡುತ್ತಿಲ್ಲ. ದುಡ್ಡು ಕೇಳುತ್ತಿದ್ದೇವೆ, ಕೇಳಬೇಕೆ ಬೇಡ್ವಾ? ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ, ಕೇಂದ್ರ ಸಮನ್ವಯದಿಂದ ಕೆಲಸ ಮಾಡಬೇಕು. ಕರ್ನಾಟಕದಲ್ಲಿ ಬರ ಬಂದರೆ ಕೇಂದ್ರದ ಜವಾಬ್ದಾರಿಯೂ ಇರುತ್ತೆ. ಕೇಂದ್ರಕ್ಕೆ ತೆರಿಗೆ ಮೂಲಕ ಹಣ ಕೊಡೋದು ರಾಜ್ಯಗಳು. ನಮಗೆ ಸಂಕಷ್ಟ ಎದುರಾದಾಗ ನೆರವಾಗಬೇಕಾಗಿದ್ದು ಕೇಂದ್ರದ ಜವಾಬ್ದಾರಿ. 33,700 ಕೋಟಿ ಬೆಳೆ ನಷ್ಟವಾಗಿದ್ದು, 17 ಸಾವಿರ ಕೋಟಿ ರೂ. ಕೇಳಿದ್ದೇವೆ. ರೈತರು ಸಂಕಷ್ಟದಲ್ಲಿದ್ದಾರೆ, ಬೇಗ ಹಣ ಕೊಡಿ ಎಂದು ಕೇಳುತ್ತಿದ್ದೇವೆ ಅಷ್ಟೆ ಎಂದರು.