ಹಾಸನ:ಜೆಡಿಎಸ್ ತೊರೆದು ಬಿಜೆಪಿ ಸೇರುವಂತೆ ಅರಸೀಕೆರೆ ನಗರಸಭಾ ಸದಸ್ಯರಿಗೆ ಹಣದ ಆಮಿಷವೊಡ್ಡಿ ನಗದು ನೀಡಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ನನ್ನ ಹೆಸರನ್ನು ಪ್ರಸ್ತಾಪಿಸಿರುವ ಶಾಸಕ ಶಿವಲಿಂಗೇಗೌಡ ವಿರುದ್ಧ ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಹೇಳಿದ್ದಾರೆ.
ನಗರದ ಪ್ರವಾಸಿಮಂದಿರದಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ಏಳು ಸದಸ್ಯರು ವಿಷಯಾಧಾರಿತವಾಗಿ ಬಿಜೆಪಿಗೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ. ಇದು ಜೆಡಿಎಸ್ ಪಕ್ಷದ ಆಂತರಿಕ ವಿಚಾರ. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನಾನು ಎರಡನೇ ವಾರ್ಡ್ ಸದಸ್ಯೆ ಕಲೈ ಅರಸಿ ಎಂಬುವರಿಗೆ 10 ಲಕ್ಷ ರೂ. ನೀಡಿದ್ದೇನೆ ಎಂಬ ಆರೋಪ ಸುಳ್ಳು ಎಂದು ಸ್ಪಷ್ಟಪಡಿಸಿದರು.
ಶಾಸಕ ಶಿವಲಿಂಗೇಗೌಡರು ತಮ್ಮ ಹುಳುಕು, ದೌರ್ಬಲ್ಯ ಮುಚ್ಚಿಕೊಳ್ಳಲು ನನ್ನ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನನಗಿರುವ ಮಾಹಿತಿ ಪ್ರಕಾರ ಶಿವಲಿಂಗೇಗೌಡರು ನಗರಸಭೆ ಸದಸ್ಯರ ಸಭೆ ಕರೆದು ಯಾವುದೇ ಕಾರಣಕ್ಕೂ ಅಧ್ಯಕ್ಷರಿಗೆ ಸಹಕಾರ ಕೊಡಬೇಡಿ. ನಗರಸಭೆ ಹೇಗೆ ನಡೆಯುತ್ತದೆ, ನಾನು ನೋಡ್ತಿನಿ ಅಂತ ಹೇಳಿದ್ರು. ನಂತರ ಅವರ ಪರಮಾಪ್ತ ಅರಸೀಕೆರೆಯ ಎಲ್ಲಾ ಯೊಜನೆಗಳಲ್ಲಿ ಮೂಗು ತೂರಿಸುತ್ತಿರುವ ಕಾರಣಕ್ಕೆ ಹಾಗೂ ಶಿವಲಿಂಗೇಗೌಡರ ವರ್ತನೆಯಿಂದ ಬೇಸತ್ತು ನಗರಸಭೆ ಸದಸ್ಯರು ನಮಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಿ ಎಂದು ಮನವಿ ಪತ್ರ ನೀಡಿದ್ದಾರೆ ಎಂದರು.