ಹಾಸನ :ಮತ ಭಿಕ್ಷೆಗಾಗಿ ಜೋಳಿಗೆ ಹಿಡಿದು ಹೊರಟಿದ್ದೇನೆ. ರಾಜ್ಯದಲ್ಲಿ ಜೆಡಿಎಸ್ ಸಂಘಟನೆ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುವುದು ನನಗೆ ಗೊತ್ತಿದೆ ಎಂದು ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿದರು. ನಗರದಲ್ಲಿ ನಿನ್ನೆ(ಗುರುವಾರ) ನಡೆದ ಜಲಧಾರೆ ಸಮಾವೇಶದಲ್ಲಿ ಮಾತನಾಡಿದ ಅವರು, ಶಿವಲಿಂಗೇಗೌಡ, ರಾಮಸ್ವಾಮಿ ಸೇರಿದಂತೆ ಯಾರೂ, ಎಲ್ಲೂ ಹೋಗಲ್ಲ.
ಉತ್ತರ ಕರ್ನಾಟಕದಿಂದ ಹಲವರು ಪಕ್ಷಕ್ಕೆ ಬರುತ್ತಾರೆ. ಮುಂದೆ ಹೊಸ ಸಿನಿಮಾ ತೋರಿಸುವೆ. ಅಲ್ಲಿಯವರೆಗೂ ಕಾಯಿರಿ. ರಾಜ್ಯದಲ್ಲಿ ಬಿಜೆಪಿ-ಕಾಂಗ್ರೆಸ್ ಎಷ್ಟೇ ಕುಣಿದಾಡಿದರೂ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತೊಲಗಬೇಕು. ಸರ್ವಧರ್ಮ ಸಮನ್ವಯ ಉಳಿಯಬೇಕು ಎಂದು ಹೇಳಿದರು.
ಜನತಾ ಜಲಧಾರೆ ಸಮಾವೇಶದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂಮಾತನಾಡಿರುವುದು.. ರಾಜ್ಯದಲ್ಲೇ ಹಾಸನ ಜಿಲ್ಲೆ ಹೋರಾಟ ಮಾಡೋ ಗಂಡಸರನ್ನು ಹುಟ್ಟಿಸಿದ ಜಿಲ್ಲೆ. ಪ್ರಜ್ವಲ್, ನಿಖಿಲ್, ಸೂರಜ್ ದೇವೇಗೌಡರ ಸ್ವತ್ತಲ್ಲ, ಅವರು ರಾಜ್ಯದ ಕೊಡುಗೆ. ನಮ್ಮತ್ರ ದುಡ್ಡಿಲ್ಲ, ದೇಶದ ಪ್ರಜಾಪ್ರಭುತ್ವ ಉಳೀಬೇಕು. ಇಂದು ದೇಶ ಏನಾಗುತ್ತಿದೆ? ಒಂದು ಲೀಟರ್ ಪೆಟ್ರೋಲ್ ಬೆಲೆ 111 ರೂ. ಆಗಿದೆ. ಕೋಟ್ಯಂತರ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಎಲ್ಲವನ್ನೂ ಖಾಸಗಿಯವರಿಗೆ ಮಾರುತ್ತಿದ್ದಾರೆ ಎಂದು ಕಿಡಿಕಾರಿದರು.
ದೇವೇಗೌಡರು ಪ್ರಧಾನಿಯಾಗಿದ್ದಕ್ಕೆ ಜಿಲ್ಲೆಯ ಜನ ಅಭಿಮಾನ ಪಡಬೇಕು. ಅವರು ರೈತರ ಬದಲು ಬೇರೆ ಕುಟುಂಬದಲ್ಲಿ ಹುಟ್ಟಿದ್ದರೆ ರಾಜ್ಯಾದ್ಯಂತ ಅವರ ಪ್ರತಿಮೆ ಹಾಕುತ್ತಿದ್ದರು. ನಮ್ಮ ಹಣೆ ಬರಹ ಹಿತ್ತಲ ಗಿಡ ಮದ್ದಲ್ಲ ಅನ್ನೋ ಹಾಗೆ ಇವರು ಬೆಳೆಸಿದವರು ಇವರನ್ನೇ ಬೈಯ್ಯುತ್ತಿದ್ದಾರೆ ಎಂದು ಸಿದ್ದರಾಮಯ್ಯ ನಡೆಯನ್ನು ಟೀಕಿಸಿದರು.
ಜೆಡಿಎಸ್ ಬಿಜೆಪಿಯ ಬಿ ಟೀಂ ಅಂತಾರೆ. ಹಾಸನದಲ್ಲಿ ಕಾಂಗ್ರೆಸ್ ವೋಟು ಕೊಟ್ಟಿದ್ದರಿಂದಲೇ ಬಿಜೆಪಿ ಗೆದ್ದಿದ್ದು ತಾನೇ. ಬಿ ಟೀಂ ಯಾರು ಎಂದು ಪ್ರಶ್ನಿಸಿದ ಅವರು, ನಾನು ಚರಿತ್ರೆ ಬರೆದವನು, ನನ್ನ ಬಗ್ಗೆ ಮಾತಾಡಬೇಡಿ ಎಂದು ಎಚ್ಚರಿಸಿದರು. ಹಿಂದೆ ಕುಮಾರಸ್ವಾಮಿ ಸರ್ಕಾರ ತೆಗೆದವರು ಯಾರು?, ರಾಹುಲ್ ಗಾಂಧಿ ಅವರೇ, ನಮ್ಮ ಸರ್ಕಾರ ತೆಗೆದರು ಎಂದಿದ್ದಾರೆ.
ಇದು ಕುವೆಂಪು ಹೇಳಿದಂತೆ ಸರ್ವಧರ್ಮದ ನಾಡು. ಮತಕ್ಕಾಗಿ ರಾಜಕೀಯ ಮಾಡಬೇಡಿ. ಮುಸ್ಲಿಂರು ನನ್ನ ಜತೆ ಇದ್ದಾರೆಂದು ಸಿದ್ದರಾಮಯ್ಯಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಆದರೆ, ನಾನು ಅಲ್ಪಸಂಖ್ಯಾತ ನಾಯಕ ಎನಿಸಿಕೊಂಡಿಲ್ಲ. ಮಠದ ದಾಸೋಹದಲ್ಲಿ ಬೆಳೆದವನು ಎಂದು ಟಾಂಗ್ ನೀಡಿದರು.
ದೇವೇಗೌಡರು ಪ್ರಧಾನಿಯಾಗಿದ್ದಾಗ ರಾಜ್ಯದ ನೀರಾವರಿಗೆ 18 ಸಾವಿರ ಕೋಟಿ ನೀಡಿದರು. ಆಲಮಟ್ಟಿ ಅಣೆಕಟ್ಟೆಯನ್ನು ಎತ್ತರ ಮಾಡಿದರೆ ನಿಮ್ಮ ಬೆಂಬಲ ವಾಪಸ್ ಪಡೆಯುತ್ತೇವೆ ಎಂದು ಚಂದ್ರಬಾಬು ನಾಯ್ಡು ಎಚ್ಚರಿಕೆ ನೀಡಿದರು. ಆದರೆ, ಗೌಡರು ಈ ಹುದ್ದೆ ಹೋದರೂ ಚಿಂತೆಯಿಲ್ಲ. ನನ್ನ ರೈತರಿಗೆ ಅನ್ಯಾಯ ಆಗಲು ಬಿಡಲ್ಲ ಎಂದರು. ಅಂತಹ ಸಂಕಲ್ಪ ಮಾಡಿದ ಮಹಾನುಭಾವ ಇರುವಾಗಲೇ ಜೆಡಿಎಸ್ ಸರ್ಕಾರ ತರಲು ಪಣ ತೊಟ್ಟಿದ್ದೇವೆ. ನಾಡಿನಲ್ಲಿ ಹಿಂದೂ-ಮುಸ್ಲಿಂ ಒಂದೇ ತಾಯಿ ಮಕ್ಕಳಂತೆ ಬಾಳಬೇಕು. ಇದು ನನ್ನ ಆಸೆ ಎಂದರು.
ಕಾಂಗ್ರೆಸ್‌ನಲ್ಲಿ ಸ್ಥಾನ ಇಲ್ಲದೇ ಇದ್ದರೂ, ಇಲ್ಲಿ ಮಾನ ಇದೆ. ದೇವೇಗೌಡರಿಗೆ ದೇವರು ಶಕ್ತಿ ಕೊಡಲಿ. ಅವರಿಗೆ ಕಾಲು ನೋವು ಇರಬಹುದು. ಆದರೆ, ತಲೆ 30 ವರ್ಷದ ಹುಡುಗನ ರೀತಿ ಇದೆ. ಅವರ ದಿನಚರಿ, ದೈವಭಕ್ತಿ ನೋಡಿ ದೇವರು ಶಕ್ತಿ ಕರುಣಿಸಿದ್ದಾನೆ. ಅವರ ಮಕ್ಕಳಾದ ರೇವಣ್ಣ, ಕುಮಾರಸ್ವಾಮಿ ಪುಣ್ಯವಂತರು ಎಂದು ಸಿ.ಎಂ ಇಬ್ರಾಹಿಂ ಹೇಳಿದರು.