ಕರ್ನಾಟಕ

karnataka

ETV Bharat / state

ಹಾಸನ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್​-ಬಿಜೆಪಿ ಸದಸ್ಯರ ನಡುವೆ ವಾಗ್ವಾದ - JDS BJP clash in Hassan Municipality

ಹಾಸನ ನಗರಸಭೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ವೇಳೆ ಜೆಡಿಎಸ್​-ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮೀಸಲಾತಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಜೆಡಿಎಸ್​ ಸದಸದ್ಯರು ಆರೋಪಿಸಿದರು.

Hassan Municipal Election
ಜೆಡಿಎಸ್​-ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು

By

Published : Oct 29, 2020, 8:01 PM IST

ಹಾಸನ : ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆಯಿತು.

ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಆರ್. ಮೋಹನ್ ಜಾತಿ ಮೀಸಲಾತಿ ದುರುಪಯೋಗ ಪಡಿಸಿದ್ದಾರೆ ಎಂದು ಆರೋಪಿಸಿದ ಜೆಡಿಎಸ್​ ಸದ್ಯರು, ಆಯ್ಕೆ ಪ್ರಕ್ರಿಯೆಯನ್ನು ತಡೆ ಹಿಡಿಯುವಂತೆ ಚುನಾವಣಾಧಿಕಾರಿ ಜಗದೀಶ್ ಅವರಿಗೆ ಆಗ್ರಹಿಸಿದರು. ಈ ವೇಳೆ ಕೆಲ ಜೆಡಿಎಸ್​ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಜೆಡಿಎಸ್​-ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು

ಹಾಸನ ನಗರಸಭೆಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಮಹಿಳೆಗೆ ಮೀಸಲಾಗಿತ್ತು. ಸರ್ವೋಚ್ಛ ನ್ಯಾಯಾಲಯದ ಆದೇಶದ ಅನ್ವಯ ಚುನಾವಣೆ ಪ್ರಕ್ರಿಯೆ ನಡೆಯಿತು. ಇಂದು (ಗುರುವಾರ) ಬೆಳಿಗ್ಗೆ 11 ರವರೆಗೂ ಅಧ್ಯಕ್ಷ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಬಿಜೆಪಿ ಬೆಂಬಲಿತ 34 ನೇ ವಾರ್ಡಿನ ನಗರಸಭೆ ಸದಸ್ಯ ಆರ್. ಮೋಹನ್ ಮಾತ್ರ ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ 1 ಗಂಟೆಗೆ ಚುನಾವಣಾಧಿಕಾರಿ ಜಗದೀಶ್ ಅಧ್ಯಕ್ಷತೆಯಲ್ಲಿ ಸದಸ್ಯರ ಸಭೆ ಪ್ರಾರಂಭವಾಯಿತು.

ಈ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ ಮತ್ತು ವಕೀಲ ಶ್ರೀಕಾಂತ್ ಹಾಗೂ ಇತರ ಸದಸ್ಯರು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಆರ್. ಮೋಹನ್ ಜಾತಿ ಮೀಸಲಾತಿ ದುರುಪಯೋಗಪಡಿಸಿಕೊಂಡು ನಕಲಿ ಜಾತಿ ಪ್ರಮಾಣ ಪತ್ರ ಸೃಷ್ಟಿಸಿ ವಂಚಿಸಿದ್ದಾರೆ ಎಂದು ಎಂದು ಆರೋಪಿಸಿದರು. ಈ ಬಗ್ಗೆ ಪ್ರಕರಣ ದಾಖಲಿಸಿ, ನಾಮಪತ್ರ ತಿರಸ್ಕರಿಸುವಂತೆ ಚುನಾವಣಾಧಿಕಾರಿಗೆ ಮನವಿ ಮಾಡಿದರು.

ಜೆಡಿಎಸ್​ ಸದಸ್ಯರ ವಾದ ಕೇಳ ಚುನಾವಣಾಧಿಕಾರಿ, ಅಧ್ಯಕ್ಷ ಸ್ತಾನಕ್ಕೆ 34 ನೇ ವಾರ್ಡಿನ ನಗರಸಭೆ ಸದಸ್ಯ ಆರ್. ಮೋಹನ್ ಎರಡು ನಾಮಪತ್ರ ಸಲ್ಲಿಸಿದ್ದಾರೆ. ಎರಡು ನಾಮಪತ್ರ ಸರಿಯಾಗಿದ್ದು, ಒಬ್ಬರೇ ಅಭ್ಯರ್ಥಿಯಾಗಿರುವುದರಿಂದ ಒಂದು ನಾಮಪತ್ರವೆಂದು ಪರಿಗಣಿಸಲಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿ 29 ನೇ ವಾರ್ಡಿನ ಮಂಗಳ ಎಂಬವರು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ಈ ವೇಳೆ ವಿರೋಧ ವ್ಯಕ್ತಪಡಿಸಿದ ಜೆಡಿಎಸ್​ ಸದಸ್ಯರು, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಬಗ್ಗೆ ಮಾಹಿತಿಯೇ ಇಲ್ಲ ಎಂದು ನಿಮ್ಮ ಸಿಬ್ಬಂದಿಯೇ ಹೇಳಿದ್ದಾರೆ. ಹಾಗಿರುವಾಗ, ದಿಢೀರನೆ ನಾಮಪತ್ರ ಹೇಗೆ ಸೃಷ್ಠಿಯಾಯಿತು ಎಂದು ಚುನಾವಣಾಧಿಕಾರಿಯನ್ನು ಪ್ರಶ್ನಿಸಿದರು. ಅಲ್ಲದೆ, ಚುನಾವಣಾಧಿಕಾರಿ ಮುಂದೆ ಧರಣಿ ನಡೆಸಿ, ಮತ್ತೊಮ್ಮೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕೊಡಬೇಕೆಂದು ಪಟ್ಟು ಹಿಡಿದರು.

ಯಾವುದಕ್ಕೂ ಜಗ್ಗದ ಚುನಾವಣಾಧಿಕಾರಿ, ಇದಕ್ಕೆ ಕಾನೂನು ಒಪ್ಪುವುದಿಲ್ಲ ಎಂದು ಉತ್ತರ ಕೊಟ್ಟರು. ಸಿಟ್ಟಿಗೆದ್ದ ಜೆಡಿಎಸ್​ ಸದಸ್ಯರು, ಚುನಾವಣಾಧಿಕಾರಿಗಳಾಗಿ ನೀವು ಒಂದು ಪಕ್ಷದ ಪರವಾಗಿ ಕೆಲಸ ಮಾಡಬಾರದು. ನಿಮ್ಮ ವಿರುದ್ಧವೇ ದೂರು ಸಲ್ಲಿಸುವುದಾಗಿ ಎಚ್ಚರಿಸಿದರು. ಈ ವೇಳೆ ಸಭೆಯಲ್ಲಿ ಕುಳಿತಿದ್ದ ಶಾಸಕ ಪ್ರೀತಮ್ ಜೆ. ಗೌಡ ಹಾಗೂ ಬಿಜೆಪಿ ಬೆಂಬಲಿತ ಸದಸ್ಯರು, ಈಗ 2 ಗಂಟೆ ಸಮಯವಾಗಿದೆ. ಊಟದ ಸಮಯವಾಗಿದ್ದು, ವಯಸ್ಸಾದ ಸದಸ್ಯರು ಸರಿಯಾದ ಸಮಯಕ್ಕೆ ಊಟ ಮಾಡಬೇಕು ಎಂದು ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸಿದರು. ಈ ವೇಳೆ ಜೆಡಿಎಸ್‌ ಮತ್ತು ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆಯಿತು.

ಈ ವೇಳೆ ಮತ್ತೆ ವಾದ ಮುಂದಿಟ್ಟ ಜೆಡಿಎಸ್​ ಸದಸ್ಯರು, ಉಪಾಧ್ಯಕ್ಷ ಸ್ಥಾನದ ಚುನಾವಣೆಯನ್ನು ನಾಳೆಗೆ ಮುಂದೂಡುವಂತೆ ಆಗ್ರಹಿಸಿದರು. ಯಾವುದೇ ಕಾರಣಕ್ಕೂ ನಾಳೆಗೆ ಮುಂದೂಡದಂತೆ ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಈ ವೇಳೆ ಮಾತನಾಡಿದ ಚುನಾವಣಾಧಿಕಾರಿ, ಉಪಾಧ್ಯಕ್ಷ ಸ್ಥಾನದ ಚುನಾವಣಾ ದಿನಾಂಕವನ್ನು ಮುಂದಿನ ದಿನಗಳಲ್ಲಿ ನಿಗದಿಪಡಿಸುವುದಾಗಿ ತಿಳಿಸಿ, ಸಭೆ ಮುಗಿಸಿ ಹೊರ ನಡೆದರು. ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಜೆಡಿಎಸ್​ ಸದಸ್ಯರು, ಚುನಾವಣಾಧಿಕಾರಿಯನ್ನು ಅಡ್ಡಗಟ್ಟಿ, ಈ ನಿರ್ಧಾರ ಸರಿಯಲ್ಲ ನಾಳೆಯೇ ಚುನಾವಣೆ ಆಗಬೇಕು ಎಂದು ಆಗ್ರಹಿಸಿದರು.

ಮಾಧ್ಯಮದವರಿಗೆ ನಿರ್ಬಂಧ :

ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯ ಸುದ್ದಿ ಮಾಡಲು ಬಂದಿದ್ದ ಮಾಧ್ಯಮದವರಿಗೆ ಮೊದಲು ಅವಕಾಶ ನೀಡಿದ ಚುನಾವಣಾಧಿಕಾರಿ, ಸಭೆ ಪ್ರಾರಂಭವಾಗುವ ಮೊದಲು ಎಲ್ಲರು ಹೊರ ಹೋಗುವಂತೆ ಸೂಚಿಸಿದರು. ಈ ವೇಳೆ ಜೆಡಿಎಸ್ ಸದಸ್ಯರು ಪತ್ರಕರ್ತರ ಬೆಂಬಲಕ್ಕೆ ನಿಂತು, ಅವಕಾಶ ಕೊಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದರು. ಈ ವೇಳೆ ಶಾಸಕ ಪ್ರೀತಂ ಗೌಡ ಪತ್ರಕರ್ತರ ನಿರ್ಬಂಧಕ್ಕೆ ಬೆಂಬಲ ನೀಡಿ, ನ್ಯಾಯಾಲಯದ ಆದೇಶದಂತೆ ಅವಕಾಶವಿಲ್ಲ ಎಂದು ಹೇಳಿದರು. ಇದಕ್ಕೆ ಒಪ್ಪದ ಜೆಡಿಎಸ್​ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

ಬಳಿಕ ಪ್ರತಿ ಪತ್ರಕರ್ತರು ಬರೆದುಕೊಟ್ಟು ಸುದ್ದಿ ಮಾಡಲು ಚುನಾವಣಾಧಿಕಾರಿ ತಿಳಿಸಿದರು. ಇದಕ್ಕೆ ಒಪ್ಪದ ಮಾಧ್ಯಮದವರು ಚುನಾವಣಾಧಿಕಾರಿ ಬಳಿ ಮನವರಿಕೆ ಮಾಡಿದರು. ಈ ವೇಳೆ ಪ್ರತಿಕ್ರಿಯಿಸಿದ ಚುನಾವಣಾಧಿಕಾರಿ, ಚುನಾವಣೆಯ ಫಲಿತಾಂಶ ಚಿತ್ರಿಕರಿಸಿ, ಆದರೇ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಬಗ್ಗೆ ನ್ಯಾಯಾಲಯದ ಆದೇಶ ಬರುವವರೆಗೂ ಪ್ರಸಾರ ಮಾಡುವಂತಿಲ್ಲ ಎಂದು ತಿಳಿಸಿದರು.

ABOUT THE AUTHOR

...view details