ಹಾಸನ:ಅಧಿಕಾರಿಗಳನ್ನು ಬೈಯ್ಯುವುದಕ್ಕೆ ನನಗೆ ಅಧಿಕಾರವಿದೆ. ನನ್ನ ಒಳ್ಳೆಯ ಕೆಲಸವನ್ನು ಸಹಿಸದೆ ಏನಾದ್ರೂ ಕ್ಯಾತೆ ತೆಗೆಯಬೇಕು ಎಂದು ನಿನ್ನೆ ಬಿಜೆಪಿಯವರು ಗಲಾಟೆ ಮಾಡಿದ್ದರು. ಆದರೆ ನನಗೆ ಅಭಿವೃದ್ಧಿ ಮುಖ್ಯ ಎಂದು ಮತ್ತೊಮ್ಮೆ ಬಿಜೆಪಿ ವಿರುದ್ಧ ಅರಸೀಕೆರೆ ಶಾಸಕ ಕೆ.ಎಂ ಶಿವಲಿಂಗೇಗೌಡ ಗುಡುಗಿದರು.
ಅರಸೀಕೆರೆಯಲ್ಲಿ ನಿನ್ನೆ ನಡೆದ ಗಲಾಟೆಯ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾನು ಟಾಸ್ಕ್ ಫೋರ್ಸ್ ಸಭೆ ಮಾಡಿದ್ದೆ. ಸಭೆಗೆ ಆಸ್ಪತ್ರೆಯ ಅಧಿಕಾರಿ ಕರಿಯಪ್ಪ ಬಂದಿರಲಿಲ್ಲ. ಅರಸೀಕೆರೆಯಲ್ಲಿ ಷಡಕ್ಷರಿ ಬಿಟ್ಟರೆ ಬೇರೆ ಯಾವ ವೈದ್ಯರು ಕೂಡ ಪಿಪಿಇ ಕಿಟ್ ಹಾಕಿಕೊಂಡು ಕೆಲಸ ಮಾಡುತ್ತಿಲ್ಲ. ಇದನ್ನು ನಾನು ಸಚಿವರ ಎದುರು ಹೇಳದೆ ಇನ್ಯಾರಿಗೆ ಹೇಳಲಿ. ಅದಕ್ಕೆ ಸಭೆಯಲ್ಲಿ ಕರಿಯಪ್ಪ ಇರುವಾಗಲೇ ಮಾಹಿತಿ ನೀಡಿದೆ. ಕರಿಯಪ್ಪ ತಪ್ಪು ಮಾಡಿದ್ದೇನೆ ಎಂದು ಸುಮ್ಮನೆ ಕುಳಿತಿದ್ದರು. ಆದರೆ ಬಿಜೆಪಿಯವರು ನನ್ನ ಹೆಸರು ಪೇಪರ್ನಲ್ಲಿ ಬರುತ್ತೆ ಅಂತ ಗಲಾಟೆ ಮಾಡಿದ್ದಾರೆ. ನಿನ್ನೆ ನಡೆದ ಸಭೆಯಲ್ಲಿ ಅಧಿಕಾರಿಗಳನ್ನು ಬಿಟ್ಟು ಬೇರೆ ಯಾರು ಭಾಗವಹಿಸುವಂತಿಲ್ಲ. ಆದರೆ ವೇದಿಕೆ ಮೇಲೆ ಕುಳಿತಿದ್ದರು ಎಂಬ ಕಾರಣಕ್ಕೆ ಸುಮ್ಮನಾದೆ. ಅವರು ಗಲಾಟೆ ಮಾಡುವ ಮುನ್ನ ಈ ವಿಚಾರವನ್ನು ಅರ್ಥ ಮಾಡ್ಕೋಬೇಕು ಎಂದು ಎನ್. ಡಿ ಪ್ರಸಾದ್ ವಿರುದ್ಧ ಗುಡುಗಿದರು.
ಬಿಜೆಪಿ ಮತ್ತು ಜೆಡಿಎಸ್ ಗಲಾಟೆ ಇದನ್ನೂ ಓದಿ: ಅಧಿಕಾರಿಗಳು ಕೆಲಸ ಮಾಡದಿದ್ದರೆ ಬೈಯ್ಯೋ ಅಧಿಕಾರ ನನಗಿದೆ, ನಾನು ಸಿಎಂನೇ ಬಿಡಲ್ಲ: ಶಾಸಕ ಶಿವಲಿಂಗೇಗೌಡ
ಈ ಬಗ್ಗೆ ಮಾತನಾಡಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಡಿ ಪ್ರಸಾದ್, ಇಷ್ಟು ಒಳ್ಳೆಯ ಆಸ್ಪತ್ರೆ ಅರಸೀಕೆರೆಯಲ್ಲಿ ನಿರ್ಮಾಣವಾಗಿದೆ ಎಂದರೆ ಅದಕ್ಕೆ ಕಾರಣ ನಮ್ಮ ಬಿಜೆಪಿ ಸರ್ಕಾರ. ಸರ್ಕಾರ ಕೊಟ್ಟ ಅನುದಾನದಲ್ಲಿ ಒಳ್ಳೆ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಆದರೆ ತುಂಬಿದ ಸಭೆಯಲ್ಲಿ ವೈದ್ಯರನ್ನು ಬೈದ್ರೆ ಅವರ ಆತ್ಮಸ್ಥೈರ್ಯ ಕುಗ್ಗಿಸಿದಂತಾಗುತ್ತದೆ. ಜೊತೆಗೆ ಇವತ್ತು ಲಸಿಕೆ ನೀಡುವ ವಿಚಾರದಲ್ಲಿ ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ. ರೆಮ್ಡಿಸಿವಿರ್ ಚುಚ್ಚುಮದ್ದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರೆ ಸರ್ಕಾರ ಸುಮ್ಮನೆ ಕೂತಿಲ್ಲ. ಈಗಾಗಲೇ ಅದಕ್ಕೆ ವಿಜಿಲೆನ್ಸ್ ನೇಮಕ ಮಾಡಿದೆ. ಇಂತಹ ಸಂದರ್ಭದಲ್ಲಿ ಸಚಿವರನ್ನು ಅರಸೀಕೆರೆಗೆ ಕರಿಸಿ ಮೊದಲು ಅವರನ್ನು ಹೊಗಳಿ ನಂತರ ವೈದ್ಯರನ್ನು ಬೈಯುವ ಮೂಲಕ ಸರ್ಕಾರವನ್ನು ಟೀಕೆ ಮಾಡುವುದು ಎಷ್ಟು ಸರಿ. ಇದನ್ನು ನಾನು ಖಂಡಿಸುತ್ತೇನೆ ಎಂದರು.
ಒಟ್ಟಿನಲ್ಲಿ ಅರಸಿಕೆರೆಯಲ್ಲಿ ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತಿಕ್ಕಾಟ ಶುರುವಾಗಿದೆ. ಈ ತಿಕ್ಕಾಟ ಮುಂದಿನ ದಿನಗಳಲ್ಲಿ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ಪ್ರಶ್ನೆಯಾಗಿದೆ.