ಹಾಸನ:ಭಾರತೀಯ ರೈಲ್ವೆ ಖಾಸಗೀಕರಣವನ್ನು ಕೈಬಿಡುವಂತೆ ಆಗ್ರಹಿಸಿ ಹಾಸನ ರೈಲ್ವೆ ನಿಲ್ದಾಣದ ಎದುರು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ದೇಶದ ಜನತೆ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ಅವರು ಮನೆಯಿಂದ ಹೊರಬರದೇ ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಭಾರತೀಯ ಜನತಾ ಪಕ್ಷ ನೇತೃತ್ವದ ಕೇಂದ್ರ ಸರ್ಕಾರ ದೇಶದ ಸಾರ್ವಜನಿಕ ಸಂಪತ್ತನ್ನು ಸದ್ದಿಲ್ಲದೆ ಖಾಸಗಿ ಕಂಪನಿಗಳಿಗೆ ಹಾಗೂ ವಿದೇಶಿ ಕಾರ್ಪೊರೇಟರ್ಗಳಿಗೆ ಮಾರಾಟ ಮಾಡುವ ಕೆಲಸಕ್ಕೆ ಕೈ ಹಾಕಿದೆ.
ಈಗಾಗಲೇ ನಮ್ಮ ದೇಶದ ಕಲ್ಲಿದ್ದಲು ಗಣಿಗಳನ್ನು, ರಕ್ಷಣಾ ವಲಯಗಳನ್ನು ವಿದ್ಯುತ್ಛಕ್ತಿ ನಿಗಮಗಳನ್ನು, ಎಪಿಎಂಸಿ ಮಾರುಕಟ್ಟೆಗಳನ್ನು ಖಾಸಗೀಕರಣ ಮಾಡಿದೆ. ಇದೀಗ ದೇಶದ ಅತಿ ದೊಡ್ಡ ಸಾರ್ವಜನಿಕ ಉದ್ಯಮವಾದ ಮತ್ತು ಜಗತ್ತಿನಲ್ಲೇ ಅತಿದೊಡ್ಡ ಸಂಪರ್ಕ ಜಾಲ ಹೊಂದಿರುವ ಭಾರತೀಯ ರೈಲ್ವೆಯನ್ನು ಖಾಸಗೀಕರಣ ಮಾಡಲು ತೀರ್ಮಾನಿಸಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಆರೋಪಿಸಿದರು.
ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ರೈಲ್ವೆ ಖಾಸಗೀಕರಣಗೊಂಡರೆ ಎಲ್ಲಾ ರೈಲ್ವೆ ಪ್ರಯಾಣಿಕರಿಗೆ ಇದುವರೆಗೂ ಸಿಗುತ್ತಿದ್ದ ಶೇ. 43 ರಷ್ಟು ಸಬ್ಸಿಡಿ ರದ್ದಾಗಲಿದೆ. ಈಗ ನಾವು ನೂರು ರೂ. ಟಿಕೆಟ್ ಖರೀದಿಸಿದರೆ, ಶೇ. 57ರಷ್ಟು ಮಾತ್ರ ಪಾವತಿಸುತ್ತಿದ್ದೇವೆ. ಉಳಿದ ಶೇ. 43ರಷ್ಟು ರೈಲ್ವೆ ಇಲಾಖೆಯಿಂದ ರಿಯಾಯಿತಿ ದೊರೆಯುತ್ತಿದೆ. ಖಾಸಗೀಕರಣ ಪರಿಣಾಮವಾಗಿ ನಮ್ಮ ರೈಲ್ವೆ ಕೋಚ್ಗಳು, ಗಾಲಿಗಳು ಮತ್ತು ರೈಲ್ವೆ ಕಾರ್ಯಾಗಾರ ಇತ್ಯಾಧಿಗಳಿಗೆ ಸರ್ಕಾರ ಉತ್ಪಾದನಾ ಬೇಡಿಕೆಗಳನ್ನು ನಿಲ್ಲಿಸುತ್ತದೆ. ಅವೆಲ್ಲ ದೇಶಿಯ ಖಾಸಗಿ ಬಂಡವಾಳಿಗರು ಮತ್ತು ಅಮೆರಿಕದ ಜನರಲ್ ಎಲೆಕ್ಟ್ರಿಕಲ್ ನಂತಹ ಕಂಪನಿಗಳ ಪಾಲಾಗುವುದರಿಂದ ಈಗಿರುವ ರೈಲ್ವೆ ಉತ್ಪಾದನಾ ಘಟಕಗಳು ಮುಚ್ಚಿ. ಅಲ್ಲಿರುವ ಸಾವಿರಾರು ನೌಕರರು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದರು.