ದಾಸಪುರ ಚರ್ಚ್ ಫಾದರ್ರಿಂದ ಸರ್ಕಾರದ ಅನುದಾನ ದುರ್ಬಳಕೆ; ಹೆಜಿನ್ ಕ್ವಡ್ರಸ್ ಆರೋಪ - church site illegal sale in hassan
ಯಾವುದೇ ಹಣಕಾಸು, ಆಸ್ತಿ ಪರಭಾರೆ ಮಾಡುವಾಗ, ಅನುದಾನ ಪಡೆದುಕೊಳ್ಳುವಾಗ ಅಥವಾ ಸಾರ್ವಜನಿಕರಿಂದ ವಂತಿಕೆ ಸಂಗ್ರಹ ಮಾಡುವಾಗ ಬಿಷಪ್ ಅವರು ದೃಢಿಕರಣ ಪತ್ರವನ್ನು ಸಂಬಂಧಪಟ್ಟ ಧರ್ಮ ಕೇಂದ್ರದ ಗುರುಗಳ ಮೂಲಕ ಸಂಬಂಧಪಟ್ಟವರಿಗೆ ಕೊಡಬೇಕಾಗಿರುತ್ತದೆ ಎಂದು ಚಿಕ್ಕಮಗಳೂರಿನ ಕ್ರೈಸ್ತ ಭಕ್ತ ಹೆಜಿನ್ ಕ್ವಡ್ರಸ್ ತಿಳಿಸಿದ್ದಾರೆ.
![ದಾಸಪುರ ಚರ್ಚ್ ಫಾದರ್ರಿಂದ ಸರ್ಕಾರದ ಅನುದಾನ ದುರ್ಬಳಕೆ; ಹೆಜಿನ್ ಕ್ವಡ್ರಸ್ ಆರೋಪ Hejin Quadrus](https://etvbharatimages.akamaized.net/etvbharat/prod-images/768-512-9138000-283-9138000-1602423099409.jpg)
ಹೆಜಿನ್ ಕ್ವಡ್ರಸ್
ಹಾಸನ:ತಾಲೂಕು ದಾಸಪುರ ಚರ್ಚ್‌ನ ಫಾದರ್ ಎ.ಶಾಂತರಾಜ್ ಎಂಬುವರು ಅರಸೀಕೆರೆಯ ಸಂತ ಮೇರಿಸ್ ಚರ್ಚ್ ಅಸೋಸಿಯೇಷನ್ ಹೆಸರಿನಲ್ಲಿ ಸರ್ಕಾರದ ಅನುದಾನ ದುರ್ಬಳಕೆ ಮಾಡಿಕೊಂಡು, ಚರ್ಚ್‌ನ ನಿವೇಶನವನ್ನು ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಿದ್ದಾರೆ ಎಂದು ಚಿಕ್ಕಮಗಳೂರಿನ ಕ್ರೈಸ್ತ ಭಕ್ತ ಹೆಜಿನ್ ಕ್ವಡ್ರಸ್ ಆರೋಪಿಸಿದ್ದಾರೆ.
ಹೆಜಿನ್ ಕ್ವಡ್ರಸ್ ಮಾತನಾಡಿದರು
ಯಾವುದೇ ಹಣಕಾಸು, ಆಸ್ತಿ ಪರಭಾರೆ ಮಾಡುವಾಗ, ಅನುದಾನ ಪಡೆದುಕೊಳ್ಳುವಾಗ ಅಥವಾ ಸಾರ್ವಜನಿಕರಿಂದ ವಂತಿಕೆ ಸಂಗ್ರಹ ಮಾಡುವಾಗ ಬಿಷಪ್ ಅವರು ದೃಢೀಕರಣ ಪತ್ರವನ್ನು ಸಂಬಂಧಪಟ್ಟ ಧರ್ಮ ಕೇಂದ್ರದ ಗುರುಗಳ ಮೂಲಕ ಸಂಬಂಧಪಟ್ಟವರಿಗೆ ಕೊಡಬೇಕಾಗಿರುತ್ತದೆ. ಚರ್ಚಿನ ಆಡಳಿತಕ್ಕೆ ಒಳಪಡುವ ಪ್ಯಾರಿಷ್ ಕೌನ್ಸಿಲ್‌ನ ಅನುಮೋದನೆ ಪಡೆದು ಮುಂದುವರೆಯಬೇಕಾಗುತ್ತದೆ ಎಂದರು.
ಸೆಂಟ್ ಮೇರಿಸ್ ಚರ್ಚ್‌ನಲ್ಲಿ ಈ ಹಿಂದೆ ಗುರುಗಳಾಗಿದ್ದ ಎ.ಶಾಂತರಾಜ್ ತಮ್ಮ ಅಧ್ಯಕ್ಷತೆಯಲ್ಲಿ ಸಂತ ಮೇರಿಸ್ ಚರ್ಚ್‌ನ 100*55 = 6050 ಚದರ ಅಡಿಯ ನಿವೇಶನದ ದಾಖಲೆ ತಿದ್ದುಪಡಿ ಮಾಡಿ ಸಂತ ಮೇರಿಸ್ ಚರ್ಚ್ ಅಸೋಷಿಯೆಷನ್ ಕಾರ್ಯದರ್ಶಿ ಎಡ್ವರ್ಡ್ ಅವರ ಹೆಸರಿಗೆ ಅನಧಿಕೃತವಾಗಿ ವರ್ಗಾವಣೆ ಮಾಡಿದ್ದಾರೆ. ಸೆಂಟ್ ಮೇರಿಸ್ ಚರ್ಚ್‌ಗೆ ಸೇರಿದ ಜಾಗದಲ್ಲಿ ಸಮುದಾಯ ಭವನ ನಿರ್ಮಾಣ ಪರವಾನಗಿ ಪಡೆಯಲು ಶುಲ್ಕ ಪಾವತಿ ಸಂದರ್ಭದಲ್ಲಿ ಅರ್ಜಿಯಲ್ಲಿ ಮಾಲೀಕರ ಹೆಸರು ಸೆಂಟ್ ಮೇರಿಸ್ ಚರ್ಚ್ ಅಸೋಸಿಯೇಷನ್ ಎಂದು ನಮೂದು ಮಾಡಲಾಗಿದೆ ಎಂದರು.
ಸಮುದಾಯ ಭವನ ನಿರ್ಮಾಣಕ್ಕಾಗಿ ಚರ್ಚ್‌ನ ಪಾಲು ಶೇ.50 ಹಾಗೂ ಸರ್ಕಾರದ ಅನುದಾನ ಶೇ.50ರಂತೆ ಒಂದು ಕೋಟಿ ರೂ.ಗಳ ಅಂದಾಜು ಪಟ್ಟಿ, ನಕ್ಷೆಯೊಂದಿಗೆ ಸಲ್ಲಿಸಿದ್ದ ಪ್ರಸ್ತಾವನೆಗೆ 2012 ರಿಂದ 2017ರೊಳಗೆ ಅಲ್ಪಸಂಖ್ಯಾತರ ಇಲಾಖೆಯಿಂದ 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಬಿಡುಗಡೆಯಾದ 50 ಲಕ್ಷ ರೂ. ಅನುದಾನ ಹಾಗೂ ಚರ್ಚ್‌ನ ಪಾಲು 50 ಲಕ್ಷ ಸೇರಿ ಸಮುದಾಯ ಭವನ ಪೂರ್ಣಗೊಳ್ಳಬೇಕಿತ್ತು. ಆದರೆ, ಕೇವಲ ಗೋಡೆ ನಿರ್ಮಿಸಿ, ಆರ್‌ಸಿಸಿ ಹಾಕಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಇಲಾಖೆಯಿಂದ 50 ಲಕ್ಷ ಅನುದಾನ ಬಿಡುಗಡೆ ಮಾಡಿರುವುದನ್ನು ಗಮನಿಸಿದರೆ ಇಲಾಖೆ ಅಧಿಕಾರಿಗಳು ಅವ್ಯವಹಾರದಲ್ಲಿ ಶಾಮಿಲಾಗಿರುವ ಶಂಕೆ ಇದೆ ಎಂದು ತಿಳಿಸಿದರು.
ಆದ್ದರಿಂದ ಈ ಬಗ್ಗೆ ತನಿಖೆ ನಡೆಸುವಂತೆ ಹಾಸನ ಜಿಲ್ಲಾಧಿಕಾರಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗೆ ದೂರು ನೀಡಿದ್ದೇವೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.