ಕರ್ನಾಟಕ

karnataka

ETV Bharat / state

ಹಾಸನ: ಮಗು ಮಾರಾಟ ಪ್ರಕರಣ, ತಾಯಿ ಸೇರಿ ಐವರ ಬಂಧನ - ಮಕ್ಕಳ ರಕ್ಷಣಾ ಘಟಕ

ಹಾಸನ ಜಿಲ್ಲೆಯಲ್ಲಿ ಮಗು ಮಾರಾಟ ಪ್ರಕರಣ ಸಂಬಂಧ ತಾಯಿ ಸೇರಿದಂತೆ ಐವರನ್ನು ಬಂಧಿಸಲಾಗಿದೆ.

Child Sale Arrest
Child Sale Arrest

By ETV Bharat Karnataka Team

Published : Jan 4, 2024, 4:33 PM IST

Updated : Jan 4, 2024, 5:23 PM IST

ಹಾಸನ: ಮಗು ಮಾರಾಟ ಪ್ರಕರಣ, ತಾಯಿ ಸೇರಿ ಐವರ ಬಂಧನ

ಹಾಸನ: ಜನಿಸಿದ ಒಂದೇ ದಿನಕ್ಕೆ ಮಗುವನ್ನು ಮಾರಾಟ ಮಾಡಿರುವ ದೂರು ಕೇಳಿ ಬಂದ ಹಿನ್ನೆಲೆ ತಾಯಿ ಹಾಗೂ ಆಶಾ ಕಾರ್ಯಕರ್ತೆ ಸೇರಿ ಐವರನ್ನು ಬಂಧಿಸಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.

2023ರ ನ. 15 ರಂದು ತಾಲೂಕಿನ ಹೆತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದಳು.‌ ತನಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆಂದು ಮಗು ಹುಟ್ಟಿದ ಮರು ದಿನವೇ (ನ. 16 ರಂದು) ಚಿಕ್ಕಮಗಳೂರು ಮೂಲದ ಉಷಾ ಎಂಬುವರಿಗೆ ಮಗುವನ್ನು ಹಸ್ತಾಂತರಿದ್ದರು. ಆದರೆ, ಮಗುವನ್ನು ಅನಧಿಕೃತವಾಗಿ ಹಸ್ತಾಂತರ ಮಾಡಲಾಗಿದೆ ಎಂದು ಮಕ್ಕಳ ರಕ್ಷಣಾ ಘಟಕಕ್ಕೆ ದೂರು ಬಂದ ಹಿನ್ನೆಲೆಯಲ್ಲಿ, ಮಕ್ಕಳ ರಕ್ಷಣಾ ಅಧಿಕಾರಿ ಕಾಂತರಾಜ್ ನೇತೃತ್ವದ ತಂಡ ಪ್ರಕರಣವನ್ನು ಬಯಲಿಗೆಳೆದಿದೆ.

ಘಟನೆ ಸಂಬಂಧ ತಾಯಿ, ಆಶಾ ಕಾರ್ಯಕರ್ತೆ ಸುಮಿತ್ರಾ, ಮಗುವನ್ನು ಕೊಂಡ ಮಹಿಳೆ ಉಷಾ ಹಾಗೂ ಮಗು ಕೊಡಲು ಪ್ರೇರಣೆ ನೀಡಿದ ಆರೋಪದಲ್ಲಿ ಶ್ರೀಕಾಂತ್ ಹಾಗೂ ಸುಬ್ರಹ್ಮಣ್ಯ ಎಂಬುವರನ್ನು ಬಂಧಿಸಲಾಗಿದೆ. ತಮಗೆ ಈಗಾಗಲೇ ಇಬ್ಬರು ಮಕ್ಕಳಿದ್ದ ಕಾರಣ ಮಗುವನ್ನು ಬೇರೆಯವರಿಗೆ ನೀಡಿದ್ದಾಗಿ ತನಿಖೆ ವೇಳೆ ತಾಯಿ ಮಾಹಿತಿ ನೀಡಿದ್ದಾಳೆ.

ಆದರೆ, ಕೆಲವರ ಮಧ್ಯಪ್ರವೇಶದಿಂದ ಮಗುವನ್ನು ಮಾರಾಟ ಮಾಡಿದ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿದ್ದು, ತಾಯಿ ಮತ್ತು ಮಗುವಿನ ರಕ್ಷಣೆ ಬಗ್ಗೆ ಗಮನಹರಿಸಬೇಕಿದ್ದ ಆಶಾ ಕಾರ್ಯಕರ್ತೆಯಿಂದಲೂ ಕಾನೂನು ಉಲ್ಲಂಘನೆ ಆಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಅಧಿಕೃತ ಮಾಹಿತಿ ಆಧರಿಸಿ ಮಕ್ಕಳ ರಕ್ಷಣಾ ಅಧಿಕಾರಿ ಕಾಂತರಾಜ್‌ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು, ತಾಯಿ ಸೇರಿ ಐವರನ್ನು ಬಂಧಿಸಿದ್ದಾರೆ. ಸದ್ಯ ಮಗುವಿಗೆ ಹಾಸನ ಮಕ್ಕಳ ರಕ್ಷಣಾ ಘಟಕದಲ್ಲಿ ಆಶ್ರಯ ನೀಡಿಲಾಗಿದೆ.‌ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

''ಜ.3 ರಂದು ಮಕ್ಕಳ ರಕ್ಷಣಾ ಅಧಿಕಾರಿ ಕಾಂತರಾಜ್ ಅವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಮಗು ಜನಿಸಿದ್ದು ಈ ಮಗುವನ್ನು ಸುಬ್ರಹ್ಮಣ್ಯ ಮತ್ತು ಶ್ರೀಕಾಂತ್ ಎಂಬುವರು ಸೇರಿ ಉಷಾ ಎಂಬುವರಿಗೆ ಮಾರಾಟ ಮಾಡಿದ್ದರು. ಇದಕ್ಕೆ ಆಶಾ ಕಾರ್ಯಕರ್ತೆ ಸುಮಿತ್ರಾ ಸಹಾಯ ಪಡೆದಿರುವುದಾಗಿ ಕಾಂತರಾಜ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಗು ಜನಿಸಿದ ಬಳಿಕ ತಾಯಿ ಮತ್ತು ಮಗುವನ್ನು ತೋಟದ ಮನೆಗೆ ಕರೆದುಕೊಂಡು ಬರಲಾಗಿತ್ತು. 16ರಂದು ಬೆಳಗಿನ ಜಾವ 5 ಗಂಟೆಗೆ ಮಗು ಮಾರಾಟ ಮಾಡಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖವಾಗಿದೆ. ಆದರೆ, ಪ್ರಾಥಮಿಕ ತನಿಖೆ ವೇಳೆ ಹಣಕಾಸಿನ ವಿಚಾರ ತಿಳಿದು ಬಂದಿಲ್ಲ. ಆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಸದ್ಯಕ್ಕೆ ಐವರನ್ನು ಬಂಧಿಸಲಾಗಿದ್ದು, ತನಿಖೆ ನಡೆಸಿದ್ದೇವೆ''. ಮೊಹಮ್ಮದ್‌ ಸುಜೀತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

ಇದನ್ನೂ ಓದಿ: ಮಗು ಮಾರಾಟ ಜಾಲ ಭೇದಿಸಿದ ಸಿಸಿಬಿ ಪೊಲೀಸರು: ಬೆಂಗಳೂರಲ್ಲಿ ಏಳು ಜನ ಆರೋಪಿಗಳ ಬಂಧನ

Last Updated : Jan 4, 2024, 5:23 PM IST

ABOUT THE AUTHOR

...view details