ಕರ್ನಾಟಕ

karnataka

ETV Bharat / state

ಚನ್ನರಾಯಪಟ್ಟಣ ಪಿಎಸ್​ಐ ಆತ್ಮಹತ್ಯೆ... ಕಾಡಿತ್ತೆ ಅಮಾನತು ಭಯ!?

ಎರಡು ದಿನಗಳ ಅವಧಿಯಲ್ಲಿ ನಡೆದ ಎರಡು ಕೊಲೆ ಪ್ರಕರಣಗಳಿಂದ ಅಮಾನತು ಶಿಕ್ಷೆಗೆ ಗುರಿಯಾಗಬಹುದು ಎಂಬ ಭಯದಿಂದ ಚನ್ನರಾಯಪಟ್ಟಣ ಪಿಎಸ್​ಐ ಅತ್ಮಹತ್ಯೆಗೆ ಶರಣಾಗಿದ್ದಾರೆ.

By

Published : Jul 31, 2020, 1:53 PM IST

Updated : Jul 31, 2020, 7:19 PM IST

Channarayapattana PSI suicide
ಪಿಎಸ್​ಐ ಆತ್ಮಹತ್ಯೆ

ಹಾಸನ:ತನ್ನ ಪರಿಮಿತಿಯಲ್ಲಿ ಎರಡು ಕೊಲೆ ಪ್ರಕರಣಗಳು ನಡೆದಿರುವುದರಿಂದ ತನ್ನಿಂದ ಕರ್ತವ್ಯಲೋಪ ಆಗದಿದ್ದರೂ ಸಹ ಅಮಾನತುಗೊಳಿಸಬಹುದು ಎಂಬ ಭಯದಿಂದ ಚನ್ನರಾಯಪಟ್ಟಣ ಠಾಣೆಯ ಪಿಎಸ್ಐ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಪಿಎಸ್​ಐ ಕಾರ್ಯನಿರ್ವಹಿಸುತ್ತಿದ್ದ ಚನ್ನರಾಯಪಟ್ಟಣ ಠಾಣಾ ವ್ಯಾಪ್ತಿಯ ಬಾಗೂರು ರಸ್ತೆಯಲ್ಲಿ ಜುಲೈ 30 ರಂದು ಪಾರಿವಾಳ ವಿಚಾರಕ್ಕೆ ವ್ಯಕ್ತಿಯೋರ್ವನ ಕೊಲೆಯಾಗಿತ್ತು. ನಿನ್ನೆ ರಾತ್ರಿ ಇಬ್ಬರು ಯುವಕರ ನಡುವೆ ಜಗಳ ನಡೆದು ಓರ್ವ ಕೊಲೆಗೀಡಾಗಿದ್ದ. ಕೇವಲ 24 ಗಂಟೆಯೊಳಗೆ ಇಬ್ಬರ ಕೊಲೆಗಳು ನಡೆದಿರುವುದು ಜನತೆಯನ್ನು ಬೆಚ್ಚಿ ಬೀಳಿಸಿತ್ತು. ಬಾಗೂರು ರಸ್ತೆಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಪಿಎಸ್​ಐ ಆತ್ಮಹತ್ಯೆ

ಗುರುವಾರ ರಾತ್ರಿ ಕೊಲೆ ನಡೆದ ಸ್ಥಳಕ್ಕೆ ತಮ್ಮ ಸಿಬ್ಬಂದಿಯೊಂದಿಗೆ ಪರಿಶೀಲನೆ ನಡೆಸಲು ಪಿಎಸ್​ಐ ಕಿರಣ್​ ಕುಮಾರ್​ ತೆರಳಿದ್ದರು. ಈ ವೇಳೆ ಸ್ಥಳದಲ್ಲಿದ್ದ ಕೆಲವರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಅಪಹಾಸ್ಯ ಮಾಡಿದ್ದಾರೆ ಎನ್ನಲಾಗ್ತಿದೆ. ಇದಲ್ಲದೆ ಚನ್ನರಾಯಪಟ್ಟಣದ ಕೆಲ ಸಾಮಾಜಿಕ ಜಾಲತಾಣದ ಗ್ರೂಪ್​ಗಳಲ್ಲಿ ಕೂಡ ಪೊಲೀಸರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು. ಜೊತೆಗೆ ನಿನ್ನೆ ಕೊಲೆಯಾದ ಯುವಕನ ಗ್ರಾಮಕ್ಕೆ ಪರಿಶೀಲನೆಗೆಂದು ಪೊಲೀಸರು ತೆರಳಿದ್ದ ವೇಳೆ ಅವರ ವಿರುದ್ಧವೇ ಆಕ್ರೋಶ ಜನರು ವ್ಯಕ್ತಪಡಿಸಿದ್ದರು. ನ್ಯಾಯ ಕೊಡಿಸದಿದ್ದರೆ ನಾವು ಶಾಸಕ ಬಾಲಕೃಷ್ಣ ಮನೆ ಮುಂದೆ ಧರಣಿ ಕೂರುತ್ತೇವೆಂದು ಎಚ್ಚರಿಸಿದ್ದರು.

ಪರಿಸ್ಥಿತಿಯನ್ನು ತಿಳಿಗೊಳಿಸಿ ಬೆಳಗ್ಗೆ ಠಾಣೆಗೆ ಬಂದು ತನ್ನ ಸಹೋದ್ಯೋಗಿಯೊಂದಿಗೆ ಕೆಲಹೊತ್ತು ಮಾತನಾಡಿದ್ದ ಪಿಎಸ್​ಐ ಕಿರಣ್​ ಕುಮಾರ್ ಅವರು, ಎರಡು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಿಶೀಲನೆಗಾಗಿ ಮೈಸೂರಿನಿಂದ ಇಲಾಖೆಯ ತಂಡ ಬರುತ್ತಿದೆ. ಎಲ್ಲಿ ಕರ್ತವ್ಯಲೋಪ ಆರೋಪದಡಿ ಅಮಾನತುಗೊಳಿಸುತ್ತಾರೋ ಎಂಬ ಭಯ ಹೊರಹಾಕಿ ಮನೆಗೆ ತೆರಳಿದ್ದರು ಎಂದು ಹೇಳಲಾಗ್ತಿದೆ.

ಹೀಗೆ ಮನೆಗೆ ಹೋದವರು, ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗ್ತಿದೆ. ಎರಡು ದಿನದ ಅವಧಿಯಲ್ಲಿ ಎರಡು ಕೊಲೆ ನಡೆದು ಬೆಚ್ಚಿಬಿದ್ದಿದ್ದ ಚನ್ನರಾಯಪಟ್ಟಣದ ಜನತೆ, ಇದೀಗ ಪೊಲೀಸ್​ ಅಧಿಕಾರಿಯೇ ಅತ್ಮಹತ್ಯೆ ಮಾಡಿಕೊಂಡಿರುವುದರಿಂದ ಮತ್ತಷ್ಟು ಆತಂಕಗೊಂಡಿದ್ದಾರೆ.

Last Updated : Jul 31, 2020, 7:19 PM IST

ABOUT THE AUTHOR

...view details