ಹಾಸನ: ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಇನ್ನಷ್ಟು ಕಡಿಮೆಯಾದರೆ ದೇಶದಲ್ಲಿ ಬೆಲೆ ಮತ್ತಷ್ಟು ಕಡಿಮೆಯಾಗುತ್ತಾ ಹೋಗುತ್ತದೆ. ಹಾಗಾಗಿ ಕೇಂದ್ರದಿಂದ ಇಂಧನ ದರ ಇಳಿಕೆ ಮಾಡುವ ಪ್ರಯತ್ನ ನಡೆದಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜೀವರಾಜ್ ಹೇಳಿದರು.
ಇಂಧನ ದರ ಇಳಿಕೆ ಬಗ್ಗೆ ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ ಮಾತನಾಡಿರುವುದು ಹಾಸನಾಂಬೆ ದೇವಿ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯಲ್ಲದೆ ಬೇರೆ ರಾಜಕಾರಣಿಯಾಗಿದ್ದರೆ, ಪೆಟ್ರೋಲ್, ಡೀಸೆಲ್ ದರವನ್ನು ಉಪಚುನಾವಣೆಗೂ ಮುನ್ನವೇ ಇಳಿಕೆ ಮಾಡುತ್ತಿದ್ದರು. ಇಂದಿನ ದೇಶದ ಪರಿಸ್ಥಿತಿಯಲ್ಲಿ ಮೋದಿಯಂತಹ ವ್ಯಕ್ತಿಯ ನಾಯಕತ್ವದಿಂದ ಮಾತ್ರ ಒಂದೇ ಬಾರಿ 7ರೂ. ಇಳಿಸುವಂತಹ ಕಾರ್ಯ ಮಾಡಲು ಸಾಧ್ಯವಾಗಿರುವುದು ನಮಗೆ ಸಂತಸವಾಗುತ್ತಿದೆ ಎಂದರು.
ರಾಜ್ಯದಲ್ಲಿ ಒಂದು ಲೀ.ಗೆ 12 ರೂ. ಇಳಿದಿದೆ. ರಾಜಕಾರಣಕ್ಕಾಗಿ ನಮ್ಮ ದೇಶದ ನಾಯಕತ್ವ ನಡೆಯುತ್ತಿಲ್ಲ. ಸನ್ನಿವೇಶಕ್ಕೆ ತಕ್ಕಂತೆ ಮತ್ತು ಜನರಿಗೆ ಅನುಕೂಲವಾಗುವಂತಹ ನಿರ್ಧಾರಗಳನ್ನ ಪ್ರಧಾನಿ ಮೋದಿ ಹಾಗು ಮುಖ್ಯಮಂತ್ರಿ ಬೊಮ್ಮಾಯಿ ತೆಗೆದುಕೊಂಡಿದ್ದಾರೆ. ತೈಲ ಬೆಲೆ ಇಳಿಕೆಯನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸುತ್ತೇನೆ ಎಂದು ತಿಳಿಸಿದರು.
ಮೋದಿ ಅವರು ಅಧಿಕಾರಕ್ಕೆ ಬಂದು 9 ವರ್ಷ ಪೂರೈಸಿದ್ದು, ಈ ಅವಧಿಯಲ್ಲಿ ಪೆಟ್ರೋಲ್ ಬೆಲೆ ಮಾತ್ರ ಏರಿಕೆಯಾಗಿಲ್ಲ. ಬದಲಾಗಿ ಎಲ್ಲಾ ವಸ್ತುಗಳ ಬೆಲೆಗಳು ಏರಿಕೆ ಆಗಿವೆ. ನಾನು ಅಡಿಕೆ ಬೆಳೆಗಾರರ ಊರಿನಿಂದ ಬಂದವನು. ಈ ಹಿಂದೆ ಕ್ವಿಂಟಲ್ ಅಡಿಕೆಗೆ 25 ಸಾವಿರ ರೂ. ಇತ್ತು, ಈಗ 68 ಸಾವಿರ ರೂ. ಆಗಿದೆ. ಎಲ್ಲಾ ಬೆಳೆಗಳ ಬೆಲೆಯೂ ಹೆಚ್ಚಾಗುತ್ತಿದೆ. ಅದರಂತೆ ಡೀಸೆಲ್, ಪೆಟ್ರೋಲ್ ಬೆಲೆ ಹೆಚ್ಚಾಗುತ್ತಿದೆ ಎಂದು ಸಮರ್ಥನೆ ನೀಡಿದರು.
ಈ ವೇಳೆ ನಗರಸಭೆ ಅಧ್ಯಕ್ಷ ಮೋಹನ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಬಂಗಾರಿ ಮಂಜು ಇತರರು ಉಪಸ್ಥಿತರಿದ್ದರು.